ಗದಗಿನ ನೆಲ ವೃತ್ತಿ ರಂಗದ ತವರು: ಬಾಳಪ್ಪ
ಗದಗ: ಗದುಗಿನ ನೆಲ ಪವಿತ್ರವಾದದ್ದು ವೃತ್ತಿ ರಂಗಭೂಮಿಗೆ ಅಪಾರವಾದ ಕೊಡುಗೆ ನೀಡಿದ ಈ ನೆಲ ವೃತ್ತಿರಂಗದ ತವರು ಎಂದು ಏಣಗಿ ಬಾಳಪ್ಪ ಅಭಿಪ್ರಾಯಪಟ್ಟರು.
ಅವರು ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘ, ಲಿಂಗಾಯತ ಅಧ್ಯಯನ ಸಂಸ್ಥೆ ಆಶ್ರಯದಲ್ಲಿ ಈಚೆಗೆ ಶಿವಾನುಭವದ ಅಂಗವಾಗಿ ಹಮ್ಮಿಕೊಂಡ ನಾಟ್ಯಭೂಷಣ ಏಣಗಿ ಬಾಳಪ್ಪನವರ ಜನ್ಮಶತಮಾನ ಸಂಭ್ರಮ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
1990ರಿಂದಲೇ ಗದಗ ಜಿಲ್ಲೆಗೆ ವೃತ್ತಿ ರಂಗಭೂಮಿಯ ನಂಟು ಬೆಳೆಯಿತು. ಅಂದಿನಿಂದ ರಂಗಭೂಮಿಗೆ ಅಪಾರ ಕೊಡಗೆಯನ್ನು ಗದಗ ಜಿಲ್ಲೆ ನೀಡಿದೆ. ಶಿರಹಟ್ಟಿಯ ವೆಂಕೋಬರಾಯರು, ಶಾಂತಕವಿಗಳು, ಯರಾಶಿ ಭರಮಪ್ಪನವರಂತಹ ಅನೇಕ ಕಲಾವಿದರು ಕಂಪನಿಯನ್ನು ಕಟ್ಟಿ ರಂಗಭೂಮಿ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಮೂಲಕ ರಂಗಭೂಮಿ ಕ್ಷೇತ್ರಕ್ಕೆ ಗದಗ ಜಿಲ್ಲೆ ಕೊಟ್ಟ ಕೊಡುಗೆ ಅನನ್ಯವಾದದ್ದು ಎಂದರು.
ಸಾನ್ನಿಧ್ಯ ವಹಿಸಿದ್ದ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಬೆಳಗಾವಿಯ ಪ್ರೊ. ಬಿ.ಎಸ್. ಗವಿಮಠ ರಚಿಸಿದ ನಾಟ್ಯಭೂಷಣ ಏಣಗಿ ಬಾಳಪ್ಪನವರು ಕೃತಿಯನ್ನು ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದ ಸದಾಶಿವ ಬ್ರಹ್ಮಾವರ ಬಿಡುಗಡೆ ಮಾಡಿದರು. ಜನ್ಮಶತಮಾನೋತ್ಸವ ಆಚರಿಸಿಕೊಂಡ ಏಣಗಿ ಬಾಳಪ್ಪ ಅವರನ್ನು ಹಾಗೂ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಲಕ್ಷ್ಮಿಬಾಯಿ ಬಾಳಪ್ಪ ಅವರನ್ನು ಸನ್ಮಾನಿಸಲಾಯಿತು.
ಬಿ.ಎಸ್. ಗವಿಮಠ, ಷಣ್ಮುಖಪ್ಪ ಪ್ಯಾಟಿ, ಸಂಗಪ್ಪ ಗುಡಿಮನಿ, ಯ.ರು. ಪಾಟೀಲ, ರಾಮಕೃಷ್ಣ ಮರಾಠೆ, ಮಲ್ಲಿಕಾರ್ಜುನ ಇಂಚಲ, ರವಿ ಪಟ್ಟಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.