ದ್ರಾಕ್ಷಿ ಬೆಳೆ ಹಾನಿಗೆ ಹಣಕಾಸು ನೆರವು: ವೆಂಕಣ್ಣ ಬಂಗಾರಿ
ರೋಣ: ಡವಣೆ ರೋಗಕ್ಕೆ ತುತ್ತಾಗಿ ಹಾನಿಗೊಳಗಾದ ದ್ರಾಕ್ಷಿ ಬೆಳೆಗಾರರಿಗೆ ಸರ್ಕಾರ ಹಣಕಾಸು ನೆರವು ನೀಡಲಿದೆ. ಹಾನಿಗೊಳಗಾದ ದ್ರಾಕ್ಷಿ ಬೆಳೆಗೆ ಪರಿಹಾರ ಹಾಗೂ ದ್ರಾಕ್ಷಿ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಲು ಒಪ್ಪಿದೆ ಎಂದು ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ನಿರ್ದೇಶಕ ವೆಂಕಣ್ಣ ಬಂಗಾರಿ ತಿಳಿಸಿದರು.
ಈ ಕುರಿತು ಪ್ರಕಟಣೆ ನೀಡಿದ ಅವರು, ಸತತ ಬರ ಹಾಗೂ ವಿವಿಧ ರೋಗಗಳಿಂದ ಹಾನಿಗೀಡಾದ ದ್ರಾಕ್ಷಿ ಬೆಳೆಗಾರರು ಪರಿಹಾರ ನೀಡುವಂತೆ ನಿರಂತರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ 2007ರಿಂದ 2013ರ ವರೆಗೆ ಹಾನಿಗೀಡಾದ ದ್ರಾಕ್ಷಿ ಬೆಳೆಯ ಪುನರುಜ್ಜೀವನಕ್ಕಾಗಿ ಕೇಂದ್ರ ಸರ್ಕಾರ ಶೇ. 50 ಹಾಗೂ ರಾಜ್ಯ ಸರ್ಕಾರ ಶೇ. 25ರಷ್ಟು ಮತ್ತು ರೈತರು ಶೇ. 25ರಷ್ಟು ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಉದ್ದೇಶಿಸಿ ರು. 336 ಕೋಟಿ ಪ್ಯಾಕೇಜ್ ನೀಡಲು ಒಪ್ಪಿದೆ. ದ್ರಾಕ್ಷಿ ಬೆಳೆಗಾರರ ಸಾಲ ಮನ್ನಾಕ್ಕೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದು, ಉತ್ತರ ಕರ್ನಾಟಕದ 11 ಜಿಲ್ಲೆಗಳ ದ್ರಾಕ್ಷಿ ಬೆಳೆಗಾರರ ರು. 511 ಕೋಟಿ ಸಾಲ ಹಾಗೂ ರು. 178 ಕೋಟಿ ಬಡ್ಡಿ ಮನ್ನಾ ಆಗುವ ಸಾಧ್ಯತೆಯಿದೆ. ಡವಣೆ ರೋಗಕ್ಕೆ ತುತ್ತಾಗಿ ಹಾನಿಯಾದ ದ್ರಾಕ್ಷಿ ಬೆಳೆಗಾರರಿಗೆ ಬೆಳೆಗಳಿಗೆ ಉದ್ದನೆಯ ಕಲ್ಲು, ತಂತಿ, ಗೊಬ್ಬರ, ಟ್ಯಾಂಕರ್ ಮೂಲಕ ನೀರು ಪೂರೈಕೆ ಮುಂತಾದವುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹಣಕಾಸಿನ ನೆರವು ಲಭ್ಯವಾಗಲಿದೆ. ಆದ್ದರಿಂದ ರೋಣ ತಾಲೂಕಿನ ದ್ರಾಕ್ಷಿ ಬೆಳೆ ಹಾನಿಗೊಳಗಾದ ರೈತರು ಅಗತ್ಯ ದಾಖಲೆ ಪತ್ರಗಳೊಂದಿಗೆ ಪಟ್ಟಣದ ದ್ರಾಕ್ಷಿ ಬೆಳೆಗಾರರ ಸಂಘದ ಕಾರ್ಯಾಲಯಕ್ಕೆ ಮನವಿ ಸಲ್ಲಿಸಬಹುದು ಎಂದು ವೆಂಕಣ್ಣ ಬಂಗಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.