ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಹಿಳಾ ಸದಸ್ಯರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ

Lingaraj Badiger
Updated On : 30 Jan 2014, 12:33 pm

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜ. 29
ಪಟ್ಟಣ ಪಂಚಾಯಿತಿ ಮಹಿಳಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಅವರ ವಾರ್ಡ್‌ಗಳಲ್ಲಿ ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಯಾವುದೇ ಮಾಹಿತಿ ನೀಡದೆ ಮುಖ್ಯಾಧಿಕಾರಿ ಮತ್ತು ಕಿರಿಯ ಅಭಿಯಂತರ ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ. ಮಹಿಳಾ ಸದಸ್ಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದು ಸದಸ್ಯೆ ಲಲಿತಾ ಕಲ್ಲಪ್ಪನವರ ಅಧಿಕಾರಿಗಳ ವರ್ತನೆ ವಿರುದ್ಧ ಗಂಭೀರ ಆರೋಪ ಮಾಡಿದರು.
ಬುಧವಾರ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಡಿಸಿದ ಅವರು, ವಾರ್ಡ್ ನಂ. 17ರಲ್ಲಿ ಚರಂಡಿ, ಬೀದಿದೀಪ, ರಸ್ತೆ, ಕುಡಿಯುವ ನೀರಿನ ತೀವ್ರ ತೊಂದರೆ ಇದ್ದು, ಜನ ನಮಗೆ ಛೀಮಾರಿ ಹಾಕುತ್ತಿದ್ದಾರೆ. ಹತ್ತಾರು ಬಾರಿ ಮುಖ್ಯಾಧಿಕಾರಿ ಡಿ.ಟಿ. ದೊಡ್ಡಮನಿ, ಕಿರಿಯ ಅಭಿಯಂತ ಜೆ.ಕೆ. ಉಳ್ಳಟ್ಟಿ ಅವರ ಗಮನಕ್ಕೆ ತಂದರೂ ಇತ್ತ ತಿರುಗಿ ನೋಡಿಲ್ಲ ಎಂದು ದೂರಿದರು.
ರು. 5 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿರುವುದಾಗಿ ಹೇಳುತ್ತಿದ್ದು, ನಮ್ಮ ವಾರ್ಡಿಗೆ ಅನುದಾನವನ್ನೆ ನೀಡಿಲ್ಲ. ಕ್ರಿಯಾ ಯೋಜನೆ ಸಿದ್ಧಪಡಿಸುವ ಸಮಯದಲ್ಲಿ ಯಾವೊಬ್ಬ ಮಹಿಳಾ ಸದಸ್ಯರ ಗಮನಕ್ಕೂ ತಂದಿಲ್ಲ. ವಾರ್ಡಿನ ಜನತೆ ದಂಗೆ ಎದ್ದು, ಕಾರ್ಯಾಲಯಕ್ಕೆ ಮುತ್ತಿಗೆ ಹಾಕುವ ಮೊದಲೇ ತುರ್ತಾಗಿ ಹಂತಹಂತವಾಗಿ ವಾರ್ಡಿಗೆ ಮೂಲ ಸೌಲಭ್ಯ ಒದಗಿಸಬೇಕು ಎಂದರು. ರೇಣುಕಾ ಏಜೆನ್ಸಿಯವರ ಹೆಸರಿನ ಮೇಲೆ ಲಕ್ಷಾಂತರ ಹಣ ಖರ್ಚು ಹಾಕಿ ಪಟ್ಟಣದಲ್ಲಿ ನೀರು ಪೂರೈಕೆಗೆ ಸಾಮಗ್ರಿ ಖರೀದಿಸಿ ಸರ್ಕಾರದ ಹಣ ದುರ್ಬಳಕೆ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಈ ಏಜೆನ್ಸಿ ಎಲ್ಲಿದೆ ಎಂಬುದೇ ಗೊತ್ತಿಲ್ಲ. ಖರೀದಿಸಿದ ಸಾಮಗ್ರಿ ಎಲ್ಲಿ ಬಳಕೆಯಾಗಿವೆ ಎಂಬುದರ ಬಗ್ಗೆ ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ರಸ್ತೆ ಕಾಮಗಾರಿಗೆ ಕಡಿ ಹೇರಿದ ಬಗ್ಗೆ ಸರಿಯಾದ ಲೆಕ್ಕವಿಲ್ಲ. ಎಂಬಿ ಬರೆಯದೆ ಗುತ್ತಿಗೆದಾರರಿಗೆ ಹಣ ನೀಡುತ್ತಿದ್ದಾರೆ ಎಂದು ಸದಸ್ಯ ಜೆ.ಆರ್. ಕುಲಕರ್ಣಿ ಆರೋಪಿಸಿದರು. 2 ತಿಂಗಳಿನಿಂದ ಪೌರ ಕಾರ್ಮಿಕರ ವೇತನವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಇವರ ಸಮಸ್ಯೆ ಬಗೆಹರಿಸದೇ ಪಟ್ಟಣದಲ್ಲಿ ನಡೆಯುವ ಉತ್ಸವ, ದಿನಾಚರಣೆಗಳಿಗೆಂದು ಸಂಘ ಸಂಸ್ಥೆಗಳ ಹೆಸರಿನಲ್ಲಿ ಯಾರ ಗಮನಕ್ಕೂ ತರದೇ ಹಣ ನೀಡುತ್ತಿರುವುದಾಗಿ ಸದಸ್ಯ ಜೆ.ಆರ್. ಕುಲಕರ್ಣಿ ಆರೋಪಿಸಿದರು. ಮಧ್ಯ ಪ್ರವೇಶಿಸಿದ ಪಪಂ ಅಧ್ಯಕ್ಷ ನಾಗರಾಜ ಲಕ್ಕುಂಡಿ ಮಾತನಾಡಿ, ಪಟ್ಟಣದಲ್ಲಿ ನೀರಿನ ಕರ, ಮನೆ ಹಫ್ತಾ ವಸೂಲಿ ಕಡಿಮೆಯಾಗಿದ್ದು, ಗುತ್ತಿಗೆ ಆಧಾರದ ಪೌರ ಕಾರ್ಮಿಕರ ವೇತನ ನೀಡುವಲ್ಲಿ ವಿಳಂಬವಾಗಿದೆ ಬೇಗನೆ ನೀಡುವ ಭರವಸೆ ನೀಡಿದರು.
ಪಪಂ ಉಪಾಧ್ಯಕ್ಷೆ ಮೀನಾಕ್ಷಿ ತಳವಾರ, ವಾರ್ಡಿನಲ್ಲಿ ಹತ್ತಾರು ಸಮಸ್ಯೆಗಳಿದ್ದು, ಅಧಿಕಾರಿಗಳಿಗೆ ಅನೇಕ ಬಾರಿ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಉಪಾಧ್ಯಕ್ಷರ ಮಾತಿಗೂ ಮುಖ್ಯಾಧಿಕಾರಿ ಬೆಲೆ ನೀಡದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಹರಿಹಾಯ್ದರು. ಖಾನಾಪುರ ಗ್ರಾಮದಲ್ಲಿ ಹೈಮಾಸ್ಕ್ ಬೀದಿ ದೀಪ ಅಳವಡಿಸಿದ್ದು, ಎಲ್ಲಿಯೂ ಬೆಳಗುತ್ತಿಲ್ಲ. ಹರಿಪುರ ಗ್ರಾಮದ ಜನತೆ ಶವ ಸಂಸ್ಕಾರಕ್ಕೆ ರುದ್ರಭೂಮಿ ಇಲ್ಲದೇ ಹಳ್ಳದ ದಂಡೆ ಮೇಲೆ ಹೆಣ ಸುಡುತ್ತಿದ್ದಾರೆ. ಪಪಂ ಅನುದಾನದ ಜತೆಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ವಿಶೇಷ ಅನುದಾನ ನೀಡಿ ಈ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ರೇಖಾ ಅಕ್ಕಿ, ಬಾಲಚಂದ್ರ ಇಟಗಿ ತಾಕೀತು ಮಾಡಿದರು. ಪಪಂ ಅಧ್ಯಕ್ಷ ನಾಗರಾಜ ಲಕ್ಕುಂಡಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯೆ ವಿಮಲಕ್ಕ ಕಪ್ಪತ್ತನವರ, ಸಿ.ಕೆ.ಮುಳಗುಂದ, ಎಚ್.ಡಿ. ಮಾಗಡಿ, ಗೂಳಪ್ಪ ಕರಿಗಾರ, ಸಂತೋಷ ಕುರಿ, ಬುಡನಶಾ ಮಕಾನದಾರ, ಶಾಂತವ್ವ ಹುಲಕಡ್ಡಿ, ಮಹಬೂಬ ಮುಳಗುಂದ, ಶೈನಾಜಬೇಗಂ ಬುವಾಜಿ ವಾರ್ಡಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಸುಜಾತಾ ಗೊಡೆಣ್ಣವರ, ಸಾವಿತ್ರಿ ಬಡಿಗೇರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement