ಮಾಧ್ಯಮಗಳಿಗೆ ಬೆದರಿ ತಾಪಂ ಸಭೆ ಮುಂದೂಡಿಕೆ
ಕನ್ನಡಪ್ರಭ ವಾರ್ತೆ, ಗದಗ, ಜ. 29
ಗದಗ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಗದಗ ತಾಪಂ ಸಾಮಾನ್ಯ ಸಭೆ ಕರೆಯಲಾಗಿತ್ತು. ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿಯೂ ಸಾಮಾನ್ಯ ಸಭೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾರೆ. ಆದರೆ, ಗದಗನ ಅಧಿಕಾರಿಗಳು ಮಾತ್ರ ಪ್ರತಿಬಾರಿಯೂ ಮಾಧ್ಯಮಗಳನ್ನು ದೂರವಿಟ್ಟು ಸಭೆ ನಡೆಸುತ್ತಿದ್ದರು. ಬುಧವಾರ ಸಭೆ ಇರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ತಾಪಂ ಸಭಾಭವನಕ್ಕೆ ಎಲ್ಲ ಮಾಧ್ಯಮ ಪ್ರತಿನಿಧಿಗಳು ತೆರಳಿದರು.
ಮಾಧ್ಯಮದವರನ್ನು ನೋಡುತ್ತಿದ್ದಂತೆ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಹಾಗೂ ಅಧ್ಯಕ್ಷರು ತಡಬಡಾಯಿಸಿದರು. ಮಾಧ್ಯಮದವರ ಮುಂದೆ ಸಭೆ ನಡೆಸುವುದು ಸರಿಯಲ್ಲ ಎನ್ನುವ ನಿರ್ಧಾರಕ್ಕೆ ಬಂದಂತೆ ಕಂಡು ಬಂದ ಆಡಳಿತ ಪಕ್ಷದ ಸದಸ್ಯರು, ಸಭೆಗೆ ನೀವೇಕೆ ಬಂದಿದ್ದೀರಿ ಎಂದು ಮಾಧ್ಯಮದವರ ಮೇಲೆಯೇ ಹರಿಹಾಯಲು ಪ್ರಯತ್ನಿಸಿದರು. ಅದರಲ್ಲಿಯೂ ಹುಲಕೋಟಿ ತಾಪಂ ಸದಸ್ಯೆ ವಿಜಯಲಕ್ಷ್ಮಿ ತಮ್ಮನಗೌಡ್ರ ಅವರ ವರ್ತನೆಯಂತೂ ಅತ್ಯಂತ ವಿಚಿತ್ರವಾಗಿತ್ತು.
ಸಕಾರಣವಿಲ್ಲದೆ ಸಭೆ ಮುಂದಕ್ಕೆ: ಇಷ್ಟೊಂದು ದಿನ ಸಭೆ ನಡೆಯುತ್ತಿದ್ದ ಬಗ್ಗೆ ನಿಮಗೆ ಮಾಹಿತಿ ಇರಲಿಲ್ಲವೇ. ಇವತ್ತಿನ ಸಭೆಗಷ್ಟೇ ಯಾಕೆ ಬಂದಿದ್ದೀರಿ ಎಂದು ಹೇಳುವ ಮೂಲಕ ನಮ್ಮ ದೋಷಗಳು ಜನರಿಗೆ ಗೊತ್ತಾಗುವುದು ಬೇಡ ಎನ್ನುವ ರೀತಿಯಲ್ಲಿ ವರ್ತಿಸಿದರು. ಇಷ್ಟೆಲ್ಲಾ ಗೊಂದಲ ನಡುವೆ ಅಧ್ಯಕ್ಷ ಹನುಮಂತಪ್ಪ ಇಂಗಳಳ್ಳಿ ಅವರು ಸಭೆಯನ್ನೇ ಮುಂದೂಡುವ ತೀರ್ಮಾನಕ್ಕೆ ಬಂದರು. ಇದರಿಂದ ಕುಪಿತರಾದ ವಿರೋಧ ಪಕ್ಷವಾದ ಬಿಜೆಪಿ ಸದಸ್ಯರು ಅದ್ಯಾವ ಕಾರಣಕ್ಕೆ ಸಭೆಯನ್ನು ಮುಂದೂಡುತ್ತೀರಿ. ಸಕಾರಣವಿಲ್ಲದೇ ಸಭೆ ಮುಂದೂಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಮಾತಿನ ಚಕಮಕಿ: ಇದರಿಂದ ತಾಪಂ ಸಭಾಭವನದಲ್ಲಿ ಕೆಲಕಾಲ ತೀವ್ರ ಗದ್ದಲದ ವಾತಾವರಣ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಸದಸ್ಯರಾದ ಪ್ರಹ್ಲಾದ ಹೊಸಳ್ಳಿ, ಮಹೇಶ ಮುಸ್ಕಿನಬಾವಿ, ಇಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಅದಕ್ಕಾಗಿ ಮಾಧ್ಯಮಗಳನ್ನು ದೂರವಿಟ್ಟು ಸಭೆ ನಡೆಸಲು ಆಡಳಿತ ಪಕ್ಷದವರು ಹವಣಿಸುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು. ಈ ವೇಳೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಜೋರಾದ ಮಾತಿನ ಚಕಮಕಿಯೂ ನಡೆಯಿತು.
ತರಾಟೆ: ಈ ವೇಳೆ ಸಭೆ ನಡೆಯುವ ಬಗ್ಗೆ ನೀವೇಕೆ ಮಾಧ್ಯಮಗಳಿಗೆ ಮಾಹಿತಿ ನೀಡುವುದಿಲ್ಲ. ಇದು ನಿಮ್ಮ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ತಾಪಂ ಇಒ ಬಿ.ರೇವಣ್ಣ ಅವರನ್ನು ಬಿಜೆಪಿ ಸದಸ್ಯರು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಇಒ ಬಿ.ರೇವಣ್ಣ ಈ ಕುರಿತು ಅಧ್ಯಕ್ಷರ ಪರವಾನಗಿ ಅಗತ್ಯವಾಗಿ ಬೇಕಾಗುತ್ತದೆ. ಅವರಿಂದ ಅನುಮತಿ ಬರದ ಹಿನ್ನೆಲೆಯಲ್ಲಿ ನಾವು ಮಾಧ್ಯಮಗಳಿಗೆ ಮಾಹಿತಿ ನೀಡಿಲ್ಲ ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡರು. ಇದೆಲ್ಲರ ಮಧ್ಯೆ ಅಧ್ಯಕ್ಷ ಹನುಮಂತಪ್ಪ ಇಂಗಳಳ್ಳಿ ಅದ್ಯಾರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದರೋ ಗೊತ್ತಿಲ್ಲ. ದೂರವಾಣಿ ಕಟ್ ಆಗುತ್ತಿದ್ದಂತೆ ಸಭೆ ಅನಿರ್ದಿಷ್ಟ ಅವಧಿಗೆ ಮುಂದೂಡಿದ ಬಗ್ಗೆ ಘೋಷಣೆ ಮಾಡಿದರು.
ಇದು ವಿರೋಧ ಪಕ್ಷದ ಸದಸ್ಯರಲ್ಲಿ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿ, ತಾಪಂ ಸಭಾಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಅಧ್ಯಕ್ಷರ ವರ್ತನೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಯಾವುದೇ ಕಾರಣವಿಲ್ಲದೇ, ಕೇವಲ ಮಾಧ್ಯಮದವರು ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವ ಕಾರಣಕ್ಕೆ ನೀವು ಸಭೆ ಮುಂದೂಡುವುದಾದರೆ, ಇಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗುತ್ತದೆ. ಅದೇಕೆ ಆಡಳಿತ ಪಕ್ಷದವರು ಮಾಧ್ಯಮಗಳಿಗೆ ಇಷ್ಟೊಂದು ಹೆದರುತ್ತಿದ್ದಾರೆ ಎನ್ನುವುದು ಕ್ಷೇತ್ರದ ಜನತೆಗೆ ಗೊತ್ತಾಗಬೇಕು. ಅಲ್ಲಿಯವರೆಗೂ ನಾವು ನಮ್ಮ ಹೋರಾಟ ಮುಂದುವರಿಸುತ್ತೇವೆ. ಈ ಕುರಿತು ಜಿಪಂ ಸಿಇಒ ಅವರಿಗೂ ದೂರು ನೀಡಲಾಗುವುದು ಎಂದರು.
ತಾಪಂ ಸಭಾಭವನದ ಮುಂದೆ ಅರ್ಧಗಂಟೆಗೂ ಹೆಚ್ಚುಕಾಲ ಪ್ರತಿಭಟನೆ ನಡೆಸಿ, ಆಡಳಿತ ಪಕ್ಷದ ವರ್ತನೆಯ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷೆ ಪ್ರತಿಭಾ ಸಿದ್ರಾಮಣ್ಣನವರ, ಸದಸ್ಯ ಮಹೇಶ ಮುಸ್ಕಿನಬಾವಿ, ಎಸ್.ಎಸ್. ಅಗಸಿಮನಿ, ಕಮಲಾಬಾಯಿ ಪೂಜಾರ, ಸುಮತಿ ಹುಯಿಲಗೋಳ, ಲಲಿತಾ ಅಣ್ಣಿಗೇರಿ, ಮಹಾಂತಮ್ಮ ಮುಂಡರಗಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.