ಮುಂಡರಗಿ ದೇಶಿ ಕಲೆಗಳ ತವರೂರು
ಮುಂಡರಗಿ: ಜಾನಪದ, ಗೀಗೀಪದ, ಹಂತಿಪದ, ತತ್ವಪದ, ದೊಡ್ಡಾಟ, ಸಣ್ಣಾಟ, ಸಾಮಾಜಿಕ, ಪೌರಾಣಿಕ ಹಾಗೂ ಐತಿಹಾಸಿಕವೂ ಸೇರಿದಂತೆ ಮುಂಡರಗಿ ತಾಲೂಕು ದೇಶಿ ಕಲೆಗಳ ತವರೂರು ಇಲ್ಲಿ ಈ ಮಣ್ಣಿನ, ಈ ನೆಲದ ದೇಶಿ ಕಲೆಗೆ ಹೆಚ್ಚಿನ ಬೆಲೆ ಇದೆ ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಈಚೆಗೆ ಪಟ್ಟಣದ ಪುರಸಭೆ ಪಕ್ಕದ ಪೊಲೀಸ್ ಪರೇಡ್ ಮೈದಾನದಲ್ಲಿ ಬಸವ ಸಾಂಸ್ಕೃತಿಕ ವೇದಿಕೆ ಮುಂಡರಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಆಶ್ರಯದಲ್ಲಿ ಜರುಗಿದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಶಿವಸಂಚಾರ ತಂಡದಿಂದ ಪ್ರದರ್ಶನಗೊಳ್ಳಲಿರುವ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಮುಂಡರಗಿಗೆ ಯಾವುದೇ ಕಲಾವಿದರು ಬಂದರೂ ಅವರನ್ನು ಪ್ರೋತ್ಸಾಹಿಸುವುದು ಇಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅನೇಕ ನಾಟಕ ಕಂಪನಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಸ್ವತಃ ಸ್ಥಳೀಯ ಕಲಾವಿದರೇ ನಾಟಕ ಅಭಿನಯ ಮಾಡಿ ಲಕ್ಷಾಂತರ ರುಪಾಯಿ ಧನಸಹಾಯ ಮಾಡುವ ಮೂಲಕ ಕಲಾವಿದರನ್ನು ಎತ್ತಿ ಹಿಡಿಯಲಾಗುತ್ತಿದೆ. ದೇಶಿ ಕಲೆಗಳಲ್ಲೊಂದಾದ ನಾಟಕ ಕಲೆ ಮಾಯವಾಗುತ್ತಿರುವ ಇಂದಿನ ಸಂದರ್ಭ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಶಿವಸಂಚಾರ ಪ್ರಾರಂಭಿಸಿ ನಾಟಕ ಕಲೆ ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ, ಡಾ. ರಾಜಶೇಖರ ಮಹಾಬಲಿ ರಚಿಸಿದ ವೈ.ಡಿ. ಬದಾಮಿಯವರ ನಿರ್ದೇಶನದ ಮಹಾಬೆಳಗು ನಾಟಕ ಉದ್ಘಾಟಿಸಿ ಮಾತನಾಡಿದರು. ಬಸವ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹೇಮಂತಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಸಿಪಿಐ ಶ್ರೀಪಾದ ಜೆಲ್ದೆ, ಡಿ.ಡಿ. ಮೋರನಾಳ, ರವೀಂದ್ರ ಉಪ್ಪಿನಬೆಟಗೇರಿ, ನಾಟಕದ ಸಂಚಾಲಕ ಶರಣು ಗುಲಬರ್ಗಾ ಪಾಲ್ಗೊಂಡಿದ್ದರು. ಎ.ಕೆ. ಮುಲ್ಲಾನವರ ಸ್ವಾಗತಿಸಿದರು. ಸಿ.ಎಸ್. ಅರಸನಾಳ ನಿರೂಪಿಸಿದರು. ನಾಗೇಶ ಹುಬ್ಬಳ್ಳಿ ವಂದಿಸಿದರು. ನಂತರ ಡಾ.ರಾಜಶೇಖರ ಮಹಾಬಲಿ ರಚಿಸಿದ ವೈ.ಡಿ. ಬದಾಮಿಯವರ ನಿರ್ದೇಶನದ ಮಹಾಬೆಳಗು ನಾಟಕ ಪ್ರದರ್ಶನಗೊಂಡಿತು.