ಶಿಸ್ತುಬದ್ಧ ಜೀವನಕ್ಕೆ ಮಹಾತ್ಮರ ಉಪದೇಶ ಸಹಕಾರಿ
ಗದಗ: ಶಿಸ್ತುಬದ್ಧ ಜೀವನಕ್ಕೆ ಮಹಾತ್ಮರ ಉಪದೇಶ, ಆದರ್ಶಗಳು ಸಹಕಾರಿಯಾಗಿವೆ ಎಂದು ಕೈಲಾಸ ಆಶ್ರಮದ ಜಯೇಂದ್ರಪುರಿ ಶ್ರೀಗಳು ಹೇಳಿದರು.
ಅವರು ಮಂಗಳವಾರ ತಾಲೂಕಿನ ಹುಲಕೋಟಿ ಗ್ರಾಮದ ಕೈಲಾಸ ಆಶ್ರಮದ 22ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು. ಜೀವನಕ್ಕೆ ಎಲ್ಲ ಮಹಾತ್ಮರ ಸಂದೇಶಗಳು ಪ್ರಸ್ತುತವಾಗಿವೆ. ಇಂತಹ ಸಂದೇಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳುವುದು ಅತ್ಯವಶ್ಯ. ಪ್ರತಿಯೊಬ್ಬರೂ ಧರ್ಮಭಕ್ತಿ ಮತ್ತು ದೇಶಭಕ್ತಿ ಹೊಂದಬೇಕು. ತಮ್ಮಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿಕೊಂಡು ಶುದ್ಧೀಕರಣಗೊಂಡು ದೈಹಿಕ, ನೈತಿಕ ಮತ್ತು ಆಧ್ಯಾತ್ಮಿಕ ಶಿಸ್ತು ರೂಢಿಸಿಕೊಂಡು ಉತ್ತಮ ಜೀವನದ ಕಡೆಗೆ ಸಾಗಬೇಕು. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ನಡೆಸಿದ ಆಡಳಿತದಿಂದ ದೇಶದ ಶೋಷಣೆಯಾಯಿತು. ಸ್ವಾತಂತ್ರ್ಯಾನಂತರ ನಡೆಯುತ್ತಿರುವ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡಾವವಾಡುತ್ತಿದೆ. ಇಂತಹ ವ್ಯವಸ್ಥೆ ಸುಧಾರಣೆಗೊಳ್ಳಲು ನಿಸ್ವಾರ್ಥ ಸೇವೆ, ತ್ಯಾಗ, ಬಾಂಧವ್ಯ ರೂಢಿಸಿಕೊಳ್ಳಬೇಕು ಎಂದರು.
ಗದಗನ ತೋಂಟದಾರ್ಯ ಮಠದ ಜಯ ತೋಂಟದ ಡಾ. ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತದ ಪುನರುಜ್ಜೀವನದ ಮೈಲುಗಲ್ಲು. ಪ್ರತಿಯೊಬ್ಬರೂ ದೇಶಭಕ್ತಿ ಹೊಂದುವುದು ಅತ್ಯವಶ್ಯ. ದಿನನಿತ್ಯದ ಯಾವುದೇ ಸಂದರ್ಭದಲ್ಲಿಯೂ ತಮ್ಮ ಆತ್ಮಗೌರವ ಕಳೆದುಕೊಳ್ಳಬಾರದು. ಅದರಲ್ಲಿ ಸೈದ್ಧಾಂತಿಕ ನೆಲೆಗಟ್ಟು ಇರುತ್ತದೆ. ಹಿರಿಯರ ಶಾಸ್ತ್ರಗಳು ಇಂದಿಗೂ ಶಾಸ್ತ್ರಗಳಾಗಿಯೇ ಉಳಿದುಕೊಂಡಿದ್ದು, ಅವುಗಳ ಆಚರಣೆ ನಡೆಯುತ್ತಿಲ್ಲ. ಹೀಗಾಗಿ, ಇಂದಿಗೂ ಡೊಂಕು ಬಾಲದ ಜೀವನ ನಡೆಯುತ್ತಿರುವುದು ನೋವಿನ ಸಂಗತಿ. ದೇಶಭಕ್ತಿ, ದೇಶಪ್ರೇಮದೊಂದಿಗೆ ಸ್ವಾಮಿ ವಿವೇಕಾನಂದರು ಬೋಧಿಸಿದ ಉಪದೇಶಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಶ್ರೀಗಳು ಮಾತನಾಡಿ, ದೇಶದ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ಎಲ್ಲ ರಂಗಗಳ ಕುರಿತು ಭಾರತೀಯ ಹಲವಾರು ಮಹಾತ್ಮರು ಚಿಂತನೆ ನಡೆಸಿದ್ದಾರೆ. ಆದರೆ ಈ ಯಾವ ಚಿಂತನೆಗಳು ಕ್ರಿಯಾಶೀಲವಾಗಿಲ್ಲ. ಕೇವಲ ಬೋಧನೆಗೆ ಮಾತ್ರ ಸೀಮಿತವಾಗಿವೆ. ಹೀಗಾಗಿ ಭಾರತ ಹೊಸ ರೂಪವಾಗಿ ಬದಲಾವಣೆಯಾಗದಿರುವುದಕ್ಕೆ ಕಾರಣವಾಗಿದೆ. ಭಾರತೀಯರಿಗೆ ನಿಜ ಸತ್ಯಬೇಕಾಗಿಲ್ಲ. ಕಿವಿಗಳಿಗೆ ಆಸ್ವಾದ ನೀಡುವ ಅನುಕೂಲಕರ ಸತ್ಯ ಬೇಕಾಗಿದೆ. ತ್ಯಾಗ ಮತ್ತು ಸೇವೆ ಬೆಳೆಸಿಕೊಂಡು ಮೌಲ್ಯಗಳನ್ನು ವೃದ್ಧಿಸಿಕೊಳ್ಳಬೇಕು. ಜಾತಿ, ಅಸೂಯೆ ನಿಗ್ರಹಕ್ಕಾಗಿ ಅಧ್ಯಾತ್ಮ ಅವಶ್ಯವಾಗಿದೆ ಎಂದರು.
ಕಾಗಿನೆಲೆ ಮಹಾಸಂಸ್ಥಾನ ಮಠದ ನಿರಂಜನಾನಂದಪುರಿ ಶ್ರೀಗಳು, ಶಿರಹಟ್ಟಿಯ ಫಕೀರೇಶ್ವರ ಸಿದ್ಧರಾಮ ಶ್ರೀಗಳು ಆಶೀರ್ವಚನ ನೀಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹುಲಕೋಟಿ ಕೈಲಾಸ ಆಶ್ರಮದ ವಿದ್ಯಾನಂದ ಪುರಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿ.ಎಸ್. ಗಡ್ಡದ್ದೇವರಮಠ, ಎಂ.ವಿ. ಪಾಟೀಲ, ಗುರಣ್ಣ ಬಳಗಾನೂರ, ಡಾ. ಬಿ.ಎಫ್. ದಂಡಿನ, ರವಿ ದಂಡಿನ ಉಪಸ್ಥಿತರಿದ್ದರು. ಜ್ಞಾನಂ ಹಾಗೂ ಸಂಗಡಿಗರು ವೇದಘೋಷ ಪಠಿಸಿದರು. ಗೀತಾಂಜಲಿ ಮೆಣಸಿನಕಾಯಿ ಪ್ರಾರ್ಥಿಸಿದರು. ಜೆ.ಕೆ. ಜಮಾದಾರ ಕಾರ್ಯಕ್ರಮ ನಿರೂಪಿಸಿದರು.