ಜಿಲ್ಲೆಯ ರೈತರ ಬೆಳೆಗಳಿಗೀಗ ಕಳ್ಳರ ಕಾಟ
ಕನ್ನಡಪ್ರಭ ವಾರ್ತೆ, ಗದಗ, ಜ. 30
ಜಿಲ್ಲೆಯ ರೈತ ಸಮುದಾಯಕ್ಕೆ ಸಮಸ್ಯೆಗಳು ಸರಮಾಲೆ ರೂಪದಲ್ಲಿ ಕಾಡುತ್ತಿದ್ದು, ಕಟಾವು ಮಾಡಿದ ಕಡಲೆ ಬೆಳೆಗೆ ಮತ್ತು ಹೊಲದಲ್ಲಿ ಒಣ ಹಾಕಿರುವ ಮೆಣಸಿನಕಾಯಿಗೆ ಕಳ್ಳರ ಕಾಟ ಹೆಚ್ಚಾಗಿದ್ದು ರೈತರನ್ನು ಕಂಗೆಡಿಸಿದೆ.
ಹಿಂಗಾರಿ ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಯಾದ ಕಡಲೆಯನ್ನು ರೈತರು ಕಿತ್ತು ಹೊಲದಲ್ಲಿ ಇಟ್ಟಿದ್ದು, ಮನೆಗೆ ತರುವ ಮೊದಲೇ ಕಳ್ಳರ ಪಾಲಾಗುತ್ತಿದೆ.
ಕಡಲೆ ಕಳ್ಳತನ: ಪ್ರಸಕ್ತ ಹಂಗಾಮಿನಲ್ಲಿ ಸಮಾಧಾನಕರ ರೀತಿಯಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಕಡಲೆ ಬೆಳೆ ಕೊಂಚ ಉತ್ತಮ ಇಳುವರಿ ಬರುತ್ತಿದೆ. ಜಿಲ್ಲಾದ್ಯಂತ ಕಡಲೆ ಒಕ್ಕಲು ಮಾಡುವ ಕಾರ್ಯ ಭರದಿಂದ ಸಾಗಿದೆ. ಆದರೆ, ಕೆಲವು ದಿನಗಳಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕಡಲೆ ಗುಂಪೆ(ಕೂಡಿಟ್ಟ)ಗಳನ್ನು ಕಳ್ಳರು ರಾತ್ರೋರಾತ್ರಿ ಕಳ್ಳತನ ಮಾಡುತ್ತಿದ್ದು, ರೈತರಿಗೆ ಕಡಲೆಯನ್ನು ರಕ್ಷಣೆಯದ್ದೇ ಚಿಂತೆಯಾಗಿದೆ.
ಇಳುವರಿ ಕಾರಣ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಈರುಳ್ಳಿಗೆ ಉತ್ತಮವಾದ ಬೆಲೆ ಬಂದ ಹಿನ್ನೆಲೆಯಲ್ಲಿ ಕಳ್ಳರು ಹೊಲದಲ್ಲಿನ ಈರುಳ್ಳಿ ಕದಿಯುತ್ತಿದ್ದರು. ಜಿಲ್ಲೆಯ ಕೋಟುಮಚಗಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕದಿಯಲು ಹೋಗಿ ಸಿಕ್ಕಿದ್ದರು. ಈಗ ಕಡಲೆ ಉತ್ತಮ ಇಳುವರಿ ಬರುತ್ತಿರುವ ಹಿನ್ನೆಲೆಯಲ್ಲಿ ನಾಲ್ಕೆ ೈದು ಕಡಲೆ ಗುಂಪೆಗಳನ್ನು ಕಳ್ಳತನ ಮಾಡಿದಲ್ಲಿ ಒಂದು ಚೀಲ ಕಡಲೆ ಸಿದ್ಧವಾಗುತ್ತದೆ. ಯಾವುದೇ ತೊಂದರೆ ಇಲ್ಲದೇ ಹಣ ಪಡೆಯಲು ರೈತರು ಬೆಳೆದ ಬೆಳೆಗೆ ಕಳ್ಳರು ಕೈಹಚ್ಚಿರುವುದು ರೈತರಿಗೆ ದೊಡ್ಡ ಸಮಸ್ಯೆಯಾಗಿದೆ.
ವಿವಿಧ ಬೆಳೆಗೂ ಸಮಸ್ಯೆ: ಕಡಲೆ ಮಾತ್ರವಲ್ಲ, ರಾತ್ರಿ ವೇಳೆಯಲ್ಲಿ ಊರಾಚೆಗೆ ಜಮೀನಿನಲ್ಲಿ ಒಣಗಲು ಹಾಕಿರುವ ಮೆಣಸಿನಕಾಯಿ, ಹೊಲದಲ್ಲಿ ಕೊನೆಯ ಹಂತದಲ್ಲಿರುವ ಬಿ.ಟಿ. ಹತ್ತಿ ಹಾಗೂ ಸೂರ್ಯಕಾಂತಿ ಬೆಳೆಗಳಿಗೂ ಕೈ ಹಚ್ಚಿರುವ ಕಳ್ಳರು ಅನುಕೂಲ ಸಿಕ್ಕಾಗಲೆಲ್ಲಾ ಬೆಳೆಗಳನ್ನು ಕದಿಯುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಹತ್ತಾರು ಸಮಸ್ಯೆಗಳು ಮತ್ತು ಬೆಲೆ ಏರಿಕೆಯ ನಡುವೆ ಬೆಳೆದ ಬೆಳೆಗಳು ಇಂದು ಕಳ್ಳರ ಪಾಲಾದಲ್ಲಿ ನಮ್ಮ ಗತಿ ಏನು ಎನ್ನುವುದು ರೈತರ ಗೋಳಾಗಿದೆ.
- ಶಿವಕುಮಾರ ಕುಷ್ಟಗಿ