ಪಂಚಮಸಾಲಿ ಸಮಾಜ ಸಭೆ
ಗದಗ: ಅಖಿಲ ಭಾರತ ಪಂಚಮಸಾಲಿ ಜಿಲ್ಲಾ ಘಟಕದ ಮಾಸಿಕ ಸಭೆ ಫೆ. 2ರಂದು ಸಂಜೆ 5ಕ್ಕೆ ನಗರದ ಕರಿಯಮ್ಮನಕಲ್ಲ ದೇವಸ್ಥಾನದಲ್ಲಿ ನಡೆಯಲಿದೆ. ಜಿಲ್ಲಾಧ್ಯಕ್ಷ ಎಂ.ಡಿ. ಕಮತರ ಸಭೆಯ ಅಧ್ಯಕ್ಷತೆ ವಹಿಸುವರು ಎಂದು ಯುವ ಘಟಕದ ಅಧ್ಯಕ್ಷ ಶಶಿಧರ ದಿಂಡೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದಿನಿಂದ ಸದ್ಭಾವನಾ ಪಾದಯಾತ್ರೆ
ಗದಗ: ತಾಲೂಕಿನ ಬಳಗಾನೂರ ಗ್ರಾಮದ ಚಿಕ್ಕೇನಕೊಪ್ಪ ಚೆನ್ನವೀರ ಶರಣದ ಮಠದ 19ನೇ ಜಾತ್ರಾ ಮಹೋತ್ಸವದ ನಿಮಿತ್ತ ಶಿವಶಾಂತವೀರ ಶರಣರು ಸಮಾಜದ ಸುಧಾರಣೆಗಾಗಿ ಶರಣ ಸದ್ಭಾವನಾ ಪಾದಯಾತ್ರೆ ಜ. 31ರಿಂದ ಕೈಗೊಳ್ಳಲಿದ್ದಾರೆ. ಯುವ ಜನಾಂಗವು ದುಶ್ಚಟಗಳಿಂದ ದೂರವಾಗಿ ಆ ಚಟಗಳೆಲ್ಲವನ್ನು ನಮಗೆ ಭಿಕ್ಷೆ ನೀಡಿ ಎನ್ನುತ್ತಾ ಯುವ ಸಮುದಾಯವನ್ನು ವ್ಯಸನಮುಕ್ತರನ್ನಾಗಿ ಮಾಡಲು ಮುಂದಾಗಿದ್ದಾರೆ. ಜ. 31ರಂದು ಹುಯಿಲಗೋಳ, ಫೆ. 1ರಂದು ಡ.ಸ. ಹಡಗಲಿ, 2ರಂದು ಕದಡಿ, 3ರಂದು ಹೊನ್ನಾಪುರ ಗ್ರಾಮಗಳಲ್ಲಿ ಶ್ರೀಗಳು ಪಾದಯಾತ್ರೆ ಕೈಗೊಂಡು ಶರಣರ ಸಂದೇಶಗಳನ್ನು ಸಾರುವ ಮೂಲಕ ಶರಣ ಸಂಸ್ಕೃತಿಯನ್ನು ಬೆಳೆಸುವ ಪ್ರಯತ್ನ ಮಾಡಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಇಂದು ವಾರ್ಷಿಕ ಸ್ನೇಹ ಸಮ್ಮೇಳನ
ಗದಗ: ಸ್ಥಳೀಯ ಸಿದ್ದಲಿಂಗನಗರದ ಬಸವೇಶ್ವರ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಜ. 31ರಂದು ಬೆಳಗ್ಗೆ 10.30ಕ್ಕೆ ಪ್ರೌಢಶಾಲೆಯ ಅವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಡಿಡಿಪಿಐ ಬಿ.ವಿ. ರಾಜೇಂದ್ರಪ್ರಸಾದ ಉದ್ಘಾಟಿಸುವರು. ಮಂಗಲಾ ತಾಪಸ್ಕರ ಬಹುಮಾನ ವಿತರಿಸುವರು. ಕೆ.ಡಿ.ಬಡಿಗೇರ ಹಾಗೂ ಐ.ಬಿ. ಬೆನಕೊಪ್ಪ ಹಸ್ತಪ್ರತಿ ಅನಾವರಣಗೊಳಿಸುವರು. ಅತಿಥಿಗಳಾಗಿ ಮನೋಹರನ್, ರವೀಂದ್ರಬಾಬು, ಎಂ.ಎ. ಹಂಚಿನಾಳ ಮುಂತಾದವರು ಆಗಮಿಸುವರು. ಸಂಸ್ಥೆಯ ಚೇರ್ಮನ್ ದಾನಪ್ಪಣ್ಣ ತಡಸದ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಫೆ. 4ರಂದು ಪೂರ್ವಭಾವಿ ಸಭೆ
ಗದಗ: ಕೇಂದ್ರ ಹಾಗೂ ರಾಜ್ಯ ಸರ್ಕಾರವು ಮಂಡಿಸಲಿರುವ 2014-15ನೇ ಸಾಲಿನ ಮುಂಗಡ ಪತ್ರದ ಪೂರ್ವಭಾವಿ ಸಭೆಗೆ ಸರ್ಕಾರವು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗೆ ಪ್ರತಿ ವರ್ಷ ಆಮಂತ್ರಣ ನೀಡುತ್ತದೆ. ತೆರಿಗೆಯಲ್ಲಿ ಬದಲಾವಣೆ ಮತ್ತು ತಿದ್ದುಪಡಿ ವಿಷಯವಾಗಿ ಸಂಸ್ಥೆಯಿಂದ ಮುಂಗಡ ಪತ್ರದ ಮನವಿ ತಯಾರಿಸಲು ಪೂರ್ವಭಾವಿ ಸಭೆ ಫೆ. 4ರಂದು ಸಂಜೆ 5ಕ್ಕೆ ಸಂಸ್ಥೆಯ ಆಡಳಿತ ಮಂಡಳಿ ಸಭಾಗೃಹದಲ್ಲಿ ಆಯೋಜಿಸಲಾಗಿದೆ. ಸಂಸ್ಥೆಯ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಸಮಸ್ತ ವಾಣಿಜ್ಯೋದ್ಯಮಿಗಳು, ಸಂಸ್ಥೆಯ ಸದಸ್ಯರು ಹಾಗೂ ಇತರೆ ಸಂಘ ಸಂಸ್ಥೆಗಳು ತೆರಿಗೆ ಹಾಗೂ ಮೂಲಭೂತ ವಿಷಯಗಳ ಬಗ್ಗೆ ಸಲಹೆ ಸೂಚನೆಗಳಿದ್ದರೆ ಲಿಖಿತ ರೂಪದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗೆ ಜ. 31ರೊಳಗಾಗಿ ಕಳುಹಿಸಬೇಕು. ತಮ್ಮ ಸಮಸ್ಯೆಗಳನ್ನು ನಮ್ಮ ಸಂಸ್ಥೆಯಿಂದ ತಯಾರಿಸುವಂತಹ ಮನವಿಯಲ್ಲಿ ಅಳವಡಿಸಲಾಗುವುದು ಎಂದು ಸಂಸ್ಥೆಯ ತೆರಿಗೆ ಉಪ ಸಮಿತಿ ಚೇರ್ಮನ್ ವೀರೇಶ ಕೂಗು ಹಾಗೂ ಸಂಸ್ಥೆಯ ಗೌರವ ಕಾರ್ಯದರ್ಶಿ ವೀರಣ್ಣ ಬೇವಿನಮರದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನರ್ವ್ಹೀಲ್ ವಾಹನಗಳಿಗೆ ಸ್ಟಿಕರ್
ಗದಗ: ಸಾರಿಗೆ ಇಲಾಖೆ ಈಚೆಗೆ ಏರ್ಪಡಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ನಿಮಿತ್ತ ಆರ್ಟಿಓ, ಪೊಲೀಸ್ ಇಲಾಖೆ ಸಹಕಾರದೊಂದಿಗೆ ಗದಗ-ಬೆಟಗೇರಿ ಇನ್ನರ್ವ್ಹೀಲ್ ಕ್ಲಬ್ ವಾಹನಗಳಿಗೆ ರಿಪ್ಲೆಕ್ಸನ್ ಸ್ಟಿಕರ್ ಹಚ್ಚುವ ಕಾರ್ಯ ಕೈಗೊಂಡಿತು. ಡಿಸಿ ಎನ್.ಎಸ್. ಪ್ರಸನ್ನಕುಮಾರ, ಎಸ್ಪಿ ಡಾ. ಎಸ್.ಡಿ. ಶರಣಪ್ಪ, ಅಪರ ಜಿಲ್ಲಾಧಿಕಾರಿ ನಾಗರಾಜ, ಆರ್ಟಿಓ ಪುರುಷೋತ್ತಮ, ಡಿಎಸ್ಪಿ ವಿಜಯಕುಮಾರ ಡಂಬಳ, ಗದಗ-ಬೆಟಗೇರಿ ಇನ್ನರ್ವ್ಹೀಲ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣಾ ವರವಿ, ಸುಲೋಚನಾ ಐಹೊಳಿ, ಸುವರ್ಣಾ ವಸ್ತ್ರದ, ಆಶಾ ಪಟ್ಟಣಶೆಟ್ಟಿ, ಪ್ರೇಮಾ ಮೇಟಿ, ಆಶಾ ಹುಕ್ಕೇರಿ, ಶಾಂತಾ ಮುಂದಿನಮನಿ, ವಿದ್ಯಾ ಸೂಡಿಶೆಟ್ಟರ, ಅಶ್ವಿನಿ ಜಗತಾಪ, ಉಮಾ ಮುನವಳ್ಳಿ ಇದ್ದರು.