ಮುಕ್ತಿಮಂದಿರ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜ. 30
ಮುಕ್ತಿಮಂದಿರ ಧರ್ಮಕ್ಷೇತ್ರದ ವೀರಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ಲೋಕ ಕಲ್ಯಾಣಾರ್ಥವಾಗಿ ಮಾಡಿರುವ ತ್ರಿಕೋಟಿ ಲಿಂಗ ಸ್ಥಾಪನೆ ಕಾರ್ಯಕ್ಕೆ ಚಾಲನೆ ದೊರಕಿದ್ದು, ಮುಕ್ತಿಮಂದಿರ ಕ್ಷೇತ್ರವು ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಸಾಲಿಗೆ ಸೇರುವ ಮೂಲಕ ಲಕ್ಷಾಂತರ ಭಕ್ತರನ್ನು ಸೆಳೆಯಲಿದೆ ಎಂದು ಬಾಳೆಹೊನ್ನೂರು ರಂಭಾಪುರಿಪೀಠದ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಹೇಳಿದರು.
ಅವರು ಗುರುವಾರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನೆಯ ಕಾಮಗಾರಿಯು ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. 10-15 ವರ್ಷಗಳಿಂದ ತ್ರಿಕೋಟಿ ಲಿಂಗಗಳ ಸ್ಥಾಪನೆಗೆ ನಡೆದ ಹೋರಾಟ ಇದೀಗ ಒಂದು ಹಂತಕ್ಕೆ ತಲುಪಿದ್ದು, ಮುಕ್ತಿಮಂದಿರ ಧರ್ಮಕ್ಷೇತ್ರವು ಭಾರತದ ಪ್ರಮುಖ ಧಾರ್ಮಿಕ ಸ್ಥಳಗಳ ನಕ್ಷೆಯಲ್ಲಿ ರಾರಾಜಿಸಲಿದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಾಧ್ಯಕ್ಷರಾದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಹಾಗೂ ಕಲಾದಗಿ ಪಂಚಗ್ರಹ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಈ ಕುರಿತು ಮಾಹಿತಿ ನೀಡಿದ ಮುಕ್ತಿಮಂದಿರ ಶ್ರೀಗಳು, ಇದೀಗ ಸುಮಾರು 65 ಎಕರೆ ಪ್ರದೇಶದಲ್ಲಿ ಇರುವ ಕ್ಷೇತ್ರವಾಗಿದೆ. ಎತ್ತರದ ಗುಡ್ಡದ ಮೇಲೆ ಸುಮಾರು 15 ಎಕರೆ ಪ್ರದೇಶದಲ್ಲಿ 5 ಸಾವಿರ ಲಿಂಗಗಳು (ಪ್ರತಿ ಲಿಂಗದ ಗರ್ಭದಲ್ಲಿ 6 ಸಾವಿರ ಲಿಂಗಗಳು) ಪ್ರತಿಷ್ಠಾಪನೆಗೊಳ್ಳಲಿವೆ. ಸುಮಾರು 8 ವರ್ತುಲಗಳಲ್ಲಿ ಲಿಂಗಗಳು ಸ್ಥಾಪನೆಯಾಗಲಿದ್ದು, ಮದ್ಯದಲ್ಲಿ ಬೃಹದಾಕಾರದ ಶಿವಲಿಂಗಾಕಾರದಲ್ಲಿರುವ ಲಿಂ. ಜಗದ್ಗುರುಗಳ ಹಾಗೂ ರೇಣುಕರ ದೇವಸ್ಥಾನ ನಿರ್ಮಾಣಗೊಳ್ಳಲಿದೆ ಎಂದು ಹೇಳಿದರು.
ಇದೊಂದು ಧಾರ್ಮಿಕ ಕೇಂದ್ರವಾಗಲಿದ್ದು, ಸರ್ವಧರ್ಮಗಳ ಜನರು ಈ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಇದು ಲಿಂ.ಶ್ರೀಗಳ ಕನಸಾಗಿದ್ದು, ಅದನ್ನು ಈಡೇರಿಸುವ ನಿಟ್ಟಿನಲ್ಲಿ ಅಪಾರ ಪ್ರಮಾಣದಲ್ಲಿ ಭಕ್ತರು ತಮ್ಮ ಸಹಾಯಹಸ್ತವನ್ನು ನೀಡುವುದರಿಂದ ಈ ಕಾರ್ಯ ಇನ್ನೂ ತ್ವರಿತ ಗತಿಯಲ್ಲಿ ಸಾಗಲು ಅನುಕೂಲವಾಗಲಿದೆ ಎಂದು ಹೇಳಿದರು.
--
ಅಭಿವೃದ್ಧಿಗೆ ಜನರ ಸಹಕಾರ ಅಗತ್ಯ
ಶಿರಹಟ್ಟಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೊಸ ಯೋಜನೆಗಳು ಅನುಷ್ಠಾನಗೊಳ್ಳುತ್ತಿದ್ದು, ಸಾರ್ವಜನಿಕರು ಜಾತಿ ಮತ್ತು ಪಕ್ಷಗಳನ್ನು ದೂರವಿಟ್ಟು ಅಭಿವೃದ್ಧಿ ಕಾಮಗಾರಿಯ ಯಶಸ್ಸಿಗೆ ಸಹಕರಿಸಬೇಕು ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಇತ್ತಿಚೆಗೆ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿಯ ಕಿಮೀ 141ರಿಂದ 151ರ ವರೆಗೆ ಶಿರಹಟ್ಟಿ ಹತ್ತಿರದಿಂದ ಕಡಕೋಳ ವರೆಗೆ ಹಾಗೂ ಕಿಮೀ 182 ರಿಂದ 192 ತೊಳಲಿಯಿಂದ ತಂಗೋಡ ಗ್ರಾಮದ ವರೆಗೆ ರು. 2.60 ಕೋಟಿ ವೆಚ್ಚದಲ್ಲಿ ಮರು ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕಾಮಗಾರಿ ಕಳಪೆಯಾಗದಂತೆ ಜವಾಬ್ದಾರಿಯಿಂದ ರಸ್ತೆ ನಿರ್ಮಿಸಿರಿ. ಅದೇ ರೀತಿ ಗ್ರಾಮಸ್ಥರು ನಿಗಾವಹಿಸಿ ಕಾಮಗಾರಿಗಳನ್ನು ಮಾಡಿಸಿಕೊಳ್ಳಿರಿ ಎಂದ ಅವರು, ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡಿ. ಆದರೆ, ಅಭಿವೃದ್ಧಿ ವಿಷಯದಲ್ಲಿ ಎಲ್ಲರೂ ಪಕ್ಷಾತೀತ ಒಕ್ಕಟ್ಟಿನಿಂದ ಕೆಲಸಕ್ಕೆ ಸಹಕರಿಸಿ. ಶಿರಹಟ್ಟಿ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಇದನ್ನು ಸಮರ್ಪಕವಾಗಿ ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ಕೈಗೊಂಡಲ್ಲಿ ಇನ್ನು ಅಭಿವೃದ್ಧಿಗೆ ಹೆಚ್ಚು ಅನುದಾನ ತರುವುದಾಗಿ ಭರವಸೆ ನೀಡಿದರು.
ಸುರೇಶ ಮಾಗಡಿ, ಮಂಜು ಕೆಲೂರ, ಪ್ರಕಾಶ ಹಿರೇಮಠ, ನಿಂಗಪ್ಪ ಮಲ್ಲಾರಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಲ್.ವೈ. ಮಾಳೋದೆ, ಸಿ.ಆರ್. ಚಿನ್ನಪ್ಪಗೌಡರ್, ಎಲ್.ಎ. ಬಾಳಿ, ಗುರುನಾಥ ಮತ್ತಿತರರು ಉಪಸ್ಥಿತರಿದ್ದರು.
--