ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಹಿಳೆಯರಿಂದ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ

Vishwanath S
Updated On : 1 Feb 2014, 10:59 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜ. 31
ಸ್ಥಳೀಯ ವಾಜಪೇಯಿ ಬಡಾವಣೆ ನಿವಾಸಿಗಳಿಗೆ ಸಮರ್ಪಕ ಕುಡಿಯುವ ನೀರು, ಚರಂಡಿ ಸ್ವಚ್ಛತೆ ಸೇರಿದಂತೆ ಇನ್ನಿತರ ಸೌಲಭ್ಯ ದೊರೆಯದೆ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಕೂಡಲೇ ಸಮಸ್ಯೆ ನಿವಾರಣೆಗೆ ಪುರಸಭೆ ಆಡಳಿತ ಮುಂದಾಗಬೇಕೆಂದು ಒತ್ತಾಯಿಸಿ ಬಡಾವಣೆ ಮಹಿಳೆಯರು ಗುರುವಾರ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆಯಿಂದ ಬಡಾವಣೆಗೆ ಕೆಲ ತಿಂಗಳಿಂದ ಸಮರ್ಪಕ ಕುಡಿವ ನೀರು ಸರಬರಾಜು ಮಾಡುತ್ತಿಲ್ಲ. ಇದರಿಂದ ಜನತೆ ಕುಡಿವ ನೀರಿಗಾಗಿ ಅಲೆದಾಡುವ ಸ್ಥಿತಿ ಇದೆ. ಇನ್ನು ಜಾನುವಾರುಗಳ ಸ್ಥಿತಿ ಹೇಳತೀರದಂತಾಗಿದೆ. ಪುರಸಭೆ ಏಕಾಏಕಿ ನೀರಿನ ಕರವನ್ನು ಹೆಚ್ಚಿಸುವ ಮೂಲಕ ಜನ ಸಾಮಾನ್ಯರ ಮೇಲೆ ಹೊರೆ ಹಾಕಿದೆ. ಸಮರ್ಪಕ ನೀರು ಪೂರೈಕೆ ಮಾಡದೆ ಕರ ಮಾತ್ರ ತುಂಬಲೇಬೇಕು ಎಂದು ಅಧಿಕಾರಿಗಳು ಸತಾಯಿಸುತ್ತಾರೆ. ಮೊದಲು ಜನತೆಗೆ ಸಮರ್ಪಕ ಕುಡಿಯುವ ನೀರು ಕೊಡಲಿ. ಬಡಾವಣೆಯಲ್ಲಿ 191 ಮನೆಗಳಿದ್ದು, ಸಾವಿರಾರು ಜನರು ವಾಸ ಮಾಡುತ್ತಿದ್ದು, ಇವರೆಲ್ಲರಿಗೂ ಒಂದೇ ಬೋರ್‌ವೆಲ್ ಇದೆ. ಮೊದಲು ಸಂಪೂರ್ಣ ನೀರು ಸಿಗುತ್ತಿತ್ತು. ಇತ್ತೀಚಿಗೆ ಬೋರ್‌ವೆಲ್‌ನಲ್ಲಿ ನೀರು ಕಡಿಮೆ ಆದ ಪರಿಣಾಮ ಕುಡಿವ ನೀರಿಗಾಗಿ ಪರದಾಡುವಂತಾಗಿದೆ. ಈಗಲೇ ಹೀಗಾದರೆ ಮುಂದೆ ಬೇಸಿಗೆಯಲ್ಲಿ ಹೇಗೆ ಎಂಬ ಭಯ ಕಾಡಲಾರಂಭಿಸಿದೆ. ಈ ಕುರಿತು ಪುರಸಭೆ ಆಡಳಿತ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಬಡಾವಣೆ ನಿವಾಸಿಗಳು ಸ್ಥಳೀಯ ಆಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನರಕದ ವಾತಾವರಣ: ವಾಜಪೇಯಿ ನಗರ ಉದಯವಾದಾಗಿನಿಂದ ಇಲ್ಲಿಯ ವರೆಗೂ ಪುರಸಭೆಯಿಂದ ಯಾವುದೇ ಮೂಲ ಸೌಲಭ್ಯ ಸಿಗುತ್ತಿಲ್ಲ. ಮನೆ ಮುಂದಿನ ಗಟಾರ ತುಂಬಿ ಉಸಿರು ಗಟ್ಟಿ ದುರ್ವಾಸನೆ ಬೀರುತ್ತಿವೆ. ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ರುಜಿನಗಳು ಹರಡುವ ಆತಂಕ ಮನೆ ಮಾಡಿದೆ. ನರಕದ ವಾತಾವರಣದಲ್ಲಿ ಜೀವಿಸುತ್ತಿದ್ದೇವೆ ಎಂದು ಪುರಸಭೆಯ ಆಡಳಿತ ವೈಖರಿಯನ್ನು ಖಂಡಿಸಿದರು.
ಉಗ್ರ ಪ್ರತಿಭಟನೆ ಎಚ್ಚರಿಕೆ: ಕೂಡಲೇ ಪುರಸಭೆಯವರು ವಾಜಪೇಯಿ ಬಡಾವಣೆಗೆ ಸಮರ್ಪಕ ಕುಡಿಯುವ ನೀರು ಒದಗಿಸದಿದ್ದಲ್ಲಿ ಪುರಸಭೆ ಆಡಳಿತ ವಿರುದ್ಧ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಬಡಾವಣೆಯ ಪೂಜಾ ಬೆಟಗೇರಿ, ಆರ್.ಎಸ್. ಮಾಲಗಿತ್ತಿ, ಖಾಸಿಂಬಿ ಅವಾಜನಾಯಕ, ವಿಜಯಲಕ್ಷ್ಮಿ ಲೋಕರೆ, ರೇಖಾ ಕಲ್ಗುಡಿ, ಶಾಂತವ್ವ ಕಂಬಾರ, ಸರಸ್ವತಿ ಆಗಲೂರ, ಭಾರತಿ ಕುಂಬಾರ, ಈರಮ್ಮ ಯರಗೇರಿ, ಶಾವಮ್ಮ ಆಶಾಪುರ, ಲಲಿತವ್ವ ಗಡ್ಡದ, ಲಕ್ಷ್ಮಿಬಾಯಿ ಯರಗೇರಿ ಮುಂತಾದವರು    ಎಚ್ಚರಿಸಿದರು.
ಪುರಸಭೆ ವ್ಯಾಪ್ತಿಯ ವಾಜಪೇಯಿ ಬಡಾವಣೆಯಲ್ಲಿ ಈ ಮುಂಚೆ ಒಂದು ಬೋರ್‌ವೆಲ್ ಕೊರೆಸಲಾಗಿತ್ತು. ಅದರಿಂದ ಸಮರ್ಪಕ ನೀರು ಸರಬರಾಜು ಆಗುತ್ತಿತ್ತು. ಇತ್ತೀಚೆಗೆ ಬೋರ್‌ವೆಲ್‌ನಲ್ಲಿ ನೀರು ಕಡಿಮೆಯಾದ ಪ್ರಯುಕ್ತ ಬಡಾವಣೆ ನಿವಾಸಿಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದೆ. ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಈಗಾಗಲೇ ರಾಜವಾಡೆ ಸಮೀಪದ ಬೋರ್‌ವೆಲ್ ಮುಖಾಂತರ ವಾಜಪೇಯಿ ನಗರಕ್ಕೆ ಪೈಪ್‌ಲೈನ್ ಮೂಲಕ ನೀರು ಒದಗಿಸುವ ಕಾಮಗಾರಿ ತೀವ್ರಗತಿಯಲ್ಲಿ ನಡೆದಿದ್ದು, ಶೀಘ್ರ ಸಮರ್ಪಕ ನೀರು ಒದಗಿಸಲಾಗುವುದು.
-ಕೆ.ಐ. ನಾಗನೂರ, ಪುರಸಭೆ ಮುಖ್ಯಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement