ಶಿವಶಾಂತವೀರ ಶರಣರಿಂದ ಜೋಳಿಗೆಗೆ ದುಶ್ಚಟಗಳ ಭಿಕ್ಷೆ
ಕನ್ನಡಪ್ರಭ ವಾರ್ತೆ, ಗದಗ, ಜ. 31
ಬಳಗಾನೂರಿನ ಚನ್ನವೀರ ಶರಣರ ಮಠದ ಜಾತ್ರಾ ಮಹೋತ್ಸವ ಮತ್ತು ಚನ್ನವೀರ ಶರಣರ 19ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡ ಸದ್ಭಾವನೆ ಯಾತ್ರೆ ಹಾಗೂ ದುಶ್ಚಟಗಳ ಭಿಕ್ಷೆಯು ಹಲವು ಜನರು ದುಶ್ಚಟಗಳ ಸಾಮಗ್ರಿಗಳನ್ನು ಶರಣರ ಜೋಳಿಗೆಗೆ ಹಾಕಿ ವ್ಯಸನಗಳಿಂದ ಮುಕ್ತರಾಗುವ ಪ್ರತಿಜ್ಞೆ ಮಾಡಿದರು. ಶಿವಶಾಂತವೀರ ಶರಣರು ನೇತೃತ್ವ ವಹಿಸಿ ಗ್ರಾಮದಲ್ಲಿ ಭಜನೆ ಮಾಡುತ್ತಾ ಸಂಚರಿಸಿ ಮನುಷ್ಯ ಶರಣರ ಅನುಭಾವದ ನುಡಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಸಂಸ್ಕೃತ, ಸುಶಿಕ್ಷಿತ ಸಜ್ಜನನಾಗಿ ಬಾಳಬೇಕು. ಉತ್ತಮ ಸಂಸ್ಕಾರ, ಸಾತ್ವಿಕ ಆಹಾರ ಮತ್ತು ಗುಣಗಳು ಮನುಷ್ಯನ ಬದುಕನ್ನು ಹಸನಗೊಳಿಸುತ್ತವೆ. ಕಾರಣ ಸದ್ಗುಣಗಳನ್ನು ಅಳವಡಿಸಿಕೊಂಡು ಸತ್ಪ್ರಜೆಗಳಾಗುವುದು ಅವಶ್ಯವೆಂದು ಆಶೀರ್ವಚನ ನೀಡಿದರು.
ಕೊಪ್ಪಳ ಗವಿಮಠದ ಸಿದ್ಧಲಿಂಗ ದೇವರು ಶರಣರ ಜೋಳಿಗೆಗೆ ದುಶ್ಚಟ, ದುರ್ವಿಚಾರ, ದುರ್ನಡತೆಯನ್ನು ಹಾಕಿ ಪವಿತ್ರರಾಗಿರಿ ಎಂದು ಶುಭ ಸಂದೇಶ ನೀಡಿದರು. ಹೊಂಬಳದ ಶಂಕರಲಿಂಗ ಭಜನಾ ಸಂಘ ಹಾಗೂ ಹುಯಿಲಗೋಳ ಗ್ರಾಮದ ಭಜನಾ ಸಂಘದ ಮತ್ತು ಸುಮಂಗಲೆಯರ ಪೂರ್ಣಕುಂಭದ ಮೆರವಣಿಗೆ ವಿಶೇಷ ಗಮನ ಸೆಳೆದವು.