4ರಂದು ಡಾ. ವೀರೇಂದ್ರ ಹೆಗ್ಗಡೆ ರೋಣಕ್ಕೆ
ರೋಣ: ರೋಣ ಮತ್ತು ನರಗುಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯ ಕಟ್ಟಡದ ಉದ್ಘಾಟನೆ ಸಮಾರಂಭ ಹಾಗೂ ತಾಲೂಕಿನ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಸಾಧನಾ ಸಮಾವೇಶ ಕಾರ್ಯಕ್ರಮಕ್ಕೆ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಜು. 4ರಂದು ರೋಣ ಪಟ್ಟಣಕ್ಕೆ ಆಗಮಿಸಲಿದ್ದಾರೆ ಎಂದು ಧ.ಗ್ರಾ. ಯೋಜನೆಯ ತಾಲೂಕು ಯೋಜನಾ ನಿರ್ದೇಶಕ ಟಿ. ಕೃಷ್ಣ ಹೇಳಿದರು.
ಅವರು ಮಂಗಳವಾರ ಪಟ್ಟಣದ ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಮಹರ್ಷಿ ಗೌತಮ ಸಭಾಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜು. 4ರಂದು ಮಧ್ಯಾಹ್ನ 2ಕ್ಕೆ ಪಟ್ಟಣದ 10ನೇ ಕ್ರಾಸ್‌ನಲ್ಲಿ ಪ್ರಾರಂಭಗೊಳ್ಳಲಿರುವ ಧ.ಗ್ರಾ. ಯೋಜನೆಯ ನೂತನ ಕಚೇರಿ ಉದ್ಘಾಟಿಸಲಿದ್ದಾರೆ. ನಂತರ ಮಧ್ಯಾಹ್ನ 3ಕ್ಕೆ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗಲಿರುವ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಶಾಸಕ ಜಿ.ಎಸ್. ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದರು.
ಪ್ರಗತಿ ಬಂಧು ಸ್ವಸಹಾಯ ಸಂಘಗಳ ಅನುದಾನ ವಿತರಣೆ ಕಾರ್ಯಕ್ರಮವನ್ನು ಸಂಸದರಾದ ಶಿವಕುಮಾರ ಉದಾಶಿ, ಪಿ.ಸಿ. ಗದ್ದಿಗೌಡ್ರ ನೆರವೇರಿಸುವರು. ಮುಖ್ಯ ಅಥಿತಿಗಳಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ, ನರಗುಂದ ಶಾಸಕ ಬಿ.ಆರ್. ಯಾವಗಲ್ಲ, ಧ.ಗ್ರಾ. ಯೋಜನೆ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ, ಜಿಪಂ ಸಿಇಒ ವೀರಣ್ಣ ತುರಮುರಿ, ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ ಉಪಸ್ಥಿತರಿರುವರು ಎಂದು ತಿಳಿಸಿದರು. ಯುವ ಮುಖಂಡ ಮಿಥುನ್ ಪಾಟೀಲ ಮಾತನಾಡಿದರು. ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ, ಎಪಿಎಂಸಿ ಮಾಜಿ ಸದಸ್ಯ ರಾಜಣ್ಣ ಸುಂಕದ, ವಿ.ಬಿ. ಸೋಮನಕಟ್ಟಿಮಠ, ಕೆಂಚಪ್ಪ ಗಡಗಿ, ಭೀಮರಡ್ಡಿ ರಡ್ಡೇರ, ಶಶಿಧರ ಧರ್ಮಾಯತ, ಅಶೋಕ ಗಡಗಿ, ಮಹೇಶ ಸೇರಿದಂತೆ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.