ವೇತನಕ್ಕಾಗಿ ಬಿಸಿ ಮುಟ್ಟಿಸಿದರು
ಶಿರಹಟ್ಟಿ: ಅಕ್ಷರ ದಾಸೋಹ ಯೋಜನೆಯಡಿ ಅಡುಗೆ ಕೆಲಸ ಮಾಡುತ್ತಿರುವ ಮಹಿಳೆಯರ ರಕ್ಷಣೆಗೆ ಸರ್ಕಾರ ಕನಿಷ್ಠ ಕೂಲಿ, ಕೆಲಸದ ಭದ್ರತೆ, ಕೇಂದ್ರ ಸರ್ಕಾರ ಘೋಷಿಸಿರುವಂತೆ ಈ ತಕ್ಷಣ ರು. 1ಸಾವಿರ ಪಾವತಿಸುವುದು, ರಾಜ್ಯ ಸರ್ಕಾರ ಸಿಐಟಿಯು ಹೋರಾಟದ ಸಂದರ್ಭದಲ್ಲಿ ಒಪ್ಪಿಕೊಂಡಂತೆ ಹೆಚ್ಚಿಸಿರುವ ರು. 500ರನ್ನು ಡಿ. 2013ರಿಂದಲೇ ಜಾರಿ ಮಾಡುವುದು ಸೇರಿದಂತೆ ಮತ್ತಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ನೌಕರರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ನಂತರ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿ ತಾಲೂಕು ಅಧ್ಯಕ್ಷೆ ಪುಷ್ಪಾ ಚವ್ಹಾಣ ಮಾತನಾಡಿ, ಬಡ, ನಿರ್ಗತಿಕ, ಹಿಂದುಳಿದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸರ್ಕಾರ ಅಕ್ಷರ ದಾಸೋಹ ಯೋಜನೆ ಜಾರಿಗೆ ತಂದಿದೆ. ಅದೇ ರೀತಿಯಾಗಿ ಇಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಕನಿಷ್ಠ ವೇತನ ನೀಡದೇ ಜೀತದಾಳುಗಳನ್ನಾಗಿ ದುಡಿಸಿಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ದೂರಿದರು.
ಶಿಕ್ಷಕರಿಗೆ ನೀಡುವ ಹಾಗೆ ಬೇಸಿಗೆ ರಜೆ ವೇತನ ನೀಡಬೇಕು. ಬಿಸಿಯೂಟ ನೌಕರರಿಗೆ ಬಿಪಿಎಲ್ ಪಡಿತರ ಚೀಟಿ ನೀಡಬೇಕು. ಅಡುಗೆ ತಯಾರಿಸುವಾಗ ಆಕಸ್ಮಿಕವಾಗಿ ಗಾಯಗಳಾದರೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ತಾಪಂ ಇಒ ಎಂ. ನಾರಾಯಣಗೆ ಮನವಿ ಸಲ್ಲಿಸಿದರು. ಶಿವಾನಂದ ಬೋಸ್ಲೆ, ಮಮತಾ ಮಾಳೆಕೊಪ್ಪ ಇತರರಿದ್ದರು.
ಅಕ್ಷರ ದಾಸೋಹ ನೌಕರರ ಪ್ರತಿಭಟನೆ
ಗದಗ: ಕನಿಷ್ಠ ಕೂಲಿ ಕೆಲಸದ ಭದ್ರತೆ, ಐಎಲ್ಸಿ ಶಿಫಾರಸು ಜಾರಿಗೆ ಆಗ್ರಹಿಸಿ ಮಂಗಳವಾರ ಗದಗ ತಾಲೂಕು ಪಂಚಾಯಿತಿ ಎದುರು ಅಕ್ಷರ ದಾಸೋಹ ನೌಕರರು ಪ್ರತಿಭಟಿಸಿ ತಾಪಂ ಇಒ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಯಶೋದಾ ಬೆಟಗೇರಿ ಮಾತನಾಡಿ, ದೇಶದಲ್ಲಿ ಅಕ್ಷರ ದಾಸೋಹ ಯೋಜನೆಯಡಿ ದುಡಿಯುತ್ತಿರುವ ಸುಮಾರು 25 ಲಕ್ಷಕ್ಕೂ ಅಧಿಕ ಮಹಿಳೆಯರು 10 ವರ್ಷಗಳಿಂದ ಕನಿಷ್ಠ ಕೂಲಿಯು ಇಲ್ಲದ ದುಡಿಮೆಯಿಂದ ರೋಸಿ ಹೋಗಿದ್ದಾರೆ. ಕೆಲವೆಡೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಅಪಘಾತಗಳು, ಸ್ಥಳೀಯ ಹಿತಾಸಕ್ತಿಗಳಿಂದ ಹಾಗೂ ಮೇಲಧಿಕಾರಿಗಳಿಂದ ಕೆಲಸಕ್ಕೆ ಕಿರುಕುಳ ಅನುಭವಿಸುವಂತಾಗಿದೆ.
ಹರಿಯಾಣ ರಾಜ್ಯದಲ್ಲಿ ರು. 2500 ನೀಡುತ್ತಿದ್ದಾರೆ. ಕೇರಳ, ತಮಿಳುನಾಡಿನಲ್ಲಿ ದಿನ ಒಂದಕ್ಕೆ ರು. 150 ಕಡಿಮೆ ಇಲ್ಲದಂತೆ ಸಂಭಾವನೆ ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಶಿಕ್ಷಣ ಮಂತ್ರಿಗಳಾದ ಕಿಮ್ಮನೆ ರತ್ನಾಕರ ಅವರು ಸ್ವತಃ ರು. 500 ಹೆಚ್ಚಿಸುವುದಾಗಿ ಲಿಖಿತವಾಗಿ ತಿಳಿಸಿಯೂ ಇದೀಗ 2014ರ ಏಪ್ರಿಲ್ನಿಂದ ಕೊಡುವುದಾಗಿ ತಿಳಿಸಿದ್ದಾರೆ. ಕಳೆದ 4 ತಿಂಗಳಿನಿಂದ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಬಿಸಿ ಅಡುಗೆಯವರಿಗೆ ಈ ಆದೇಶ ತೀರಾ ನಿರಾಶೆ ತಂದಿದೆ. ಈ ಕೂಡಲೇ ಅಕ್ಷರ ದಾಸೋಹ ನೌಕರರಿಗೆ ಸೂಕ್ತ ಸೌಲಭ್ಯ ನೀಡುವಲ್ಲಿ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ನಗರದ ಮುನ್ಸಿಪಲ್ ಮೈದಾನದಿಂದ ಹೊರಟು ತಾಪಂ ಕಚೇರಿ ಎದುರು ಪ್ರತಿಭಟಿಸಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಶೋಭಾ ನರಗುಂದ, ನಾಗರತ್ನ ಬಡಿಗಣ್ಣನವರ, ನೀಲಾ ಬಾರಕೇರ, ಮಲ್ಲಮ್ಮ ಕಡಿದಾಳ, ಯಲ್ಲವ್ವ ತಳಹಾಳ, ಲಕ್ಷ್ಮಮ್ಮ ಚಿಲಕವಾಡ, ಪಾರ್ವತಿ ಬದಿ, ಶಾಂತಾ ಹಿಮ್ಮಡಿ, ಚನ್ನಮ್ಮ ಶ್ಯಾವಿ ಮುಂತಾದವರು ಪಾಲ್ಗೊಂಡಿದ್ದರು.