ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನೀರಿಲ್ಲದೇ ಬಾಡುತ್ತಿದೆ ಉದ್ಯಾನ

Mainashree
Updated On : 3 Jul 2014, 9:07 am

ಕನ್ನಡಪ್ರಭ ವಾರ್ತೆ, ರೋಣ, ಜು. 2
ಪಟ್ಟಣದ 13ನೇ ವಾರ್ಡ್‌ನ ಮುಗಳಿ ರಸ್ತೆಯಲ್ಲಿ ನಿರ್ಮಿಸಲಾದ ಸಾರ್ವಜನಿಕ ಉದ್ಯಾನವನದ ಸಸಿಗಳು, ಹೂವಿನ ತೋಟ, ಗಿಡಗಳು, ಬಳ್ಳಿಗಳು ನೀರಿಲ್ಲದೆ ಒಣಗಿವೆ. ನಿರ್ವಹಣೆ ಮಾಡಬೇಕಿದ್ದ ಸ್ಥಳೀಯ ಪುರಸಭೆ ನಿರ್ಲಕ್ಷ್ಯ ವಹಿಸಿದ್ದು, ಪರಿಸರ ಸ್ನೇಹಿಗಳಿಗೆ, ವಾಯು ವಿಹಾರಿಗಳಿಗೆ ತೀವ್ರ ಬೇಸರ ತಂದಿದೆ.
ಪುರಸಭೆಯ 2009-10ನೇ ಸಾಲಿನ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿಯಲ್ಲಿ ರು. 28 ಲಕ್ಷ ವೆಚ್ಚದಲ್ಲಿ ಸುಮಾರು 20 ಗುಂಟೆ ಜಾಗೆಯಲ್ಲಿ ಕೆ.ಆರ್.ಡಿ.ಸಿ.ಎಲ್. (ಭೂಸೇನಾ ನಿಗಮ) ಸುಂದರವಾದ ಬೃಹತ್ ಉದ್ಯಾನವನ್ನು ನಿರ್ಮಿಸಿ, ಒಂದುವರೆ ವರ್ಷದ ಹಿಂದೆ ಸ್ಥಳೀಯ ಪುರಸಭೆಗೆ ಹಸ್ತಾಂತರಿಸಿದೆ. ವಿಪರ್ಯಾಸವೆಂದರೆ ಸ್ಥಳೀಯ ಪುರಸಭೆ ಈವರೆಗೂ ಉದ್ಯಾನವನದ ಸ್ಥಿತಿ ಗತಿ ಮತ್ತು ನಿರ್ವಹಣೆ ಕುರಿತು ಒಮ್ಮೆಯೂ ಗಮನ ಹರಿಸಿಲ್ಲ. ಉದ್ಯಾನವನ ಕಾಯಲೆಂದು (ಪಾಲಕ) ನೇಮಿಸಲಾದ ವ್ಯಕ್ತಿಗೆ 3 ತಿಂಗಳಿನಿಂದ ಸಂಬಳ ನೀಡಿಲ್ಲ.  
ಒಂದೂವರೆ ತಿಂಗಳಿನಿಂದ ಉದ್ಯಾನವನಕ್ಕೆ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಉದ್ಯಾನವನದಲ್ಲಿನ ಮೋಟಾರ್ ರಿಪೇರಿಗೆ ಬಂದು 2 ತಿಂಗಳಾಗಿದ್ದು, ದುರಸ್ತಿ ಹಾಗೂ ಸಮರ್ಪಕ ನೀರು ಪೂರೈಕೆ ಮಾಡುವಂತೆ ಇಲ್ಲಿನ ವನಪಾಲಕ ಬಸಪ್ಪ ಮಣ್ಣೇರಿ, ಪುರಸಭೆ ಆಡಳಿತ ಮತ್ತು ಅಧಿಕಾರಿಗಳ ಗಮನಕ್ಕೆ ಅನೇಕ ಬಾರಿ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಕಳೆ ಕುಂದುತ್ತಿದೆ ಉದ್ಯಾನ
ಉದ್ಯಾನವನದಲ್ಲಿ ರಿವಲ್ ವಾಲಿಂಗ್, ಪ್ಲೇಯಿಂಗ್ ಚೆರ್, ಪ್ಲೇಯಿಂಗ್ ಹ್ಯಾಂಗರ್ ಸೇರಿದಂತೆ ವಿವಿಧ ಬಗೆಯ ಮಕ್ಕಳ ಆಟದ ಸಾಮಗ್ರಿಗಳಿವೆ. ಆಕರ್ಷಕ ಕಲ್ಲಿನ ಕಾರಂಜಿ ಇದ್ದು, ಇದರಲ್ಲಿ ಒಮ್ಮೆಯೂ ನೀರು ಚಿಮ್ಮಿಲ್ಲ. ಕಲ್ಲಿನ ಕಾರಂಜಿ ಶೋ ಕೇಸಿನಲ್ಲಿ ಇಟ್ಟಿರುವ ಗೊಂಬೆಯಂತೆ ಕಾಣುತ್ತಿವೆ. ಉದ್ಯಾನವನದಲ್ಲಿ ಪೋಗನ್ ಇಲಾನಿ, ತುಳಜಾ, ದಾಸವಾಳ, ಜುನಿಕಾರ, ಸಂಪಿಗೆ, ಕೋನಾಮಿಕ್ಸ್, ಅಕಿಲೆಪಿ ತಿಮ್ಮ, ಪ್ಲೋಟಾನ್, ಸೈಪ್ಲರ್ ಮತ್ತು ಗೋಡಿಯನ್ ಸೇರಿದಂತೆ 25ಕ್ಕೂ ಹೆಚ್ಚು ವಿವಿಧ ತಳಿಯ ಬಣ್ಣ ಬಣ್ಣದ ಆಕರ್ಷಣೀಯ ಸಸ್ಯಗಳಿವೆ. ಇವುಗಳು ಸರಿಯಾದ ಪಾಲನೆ, ಪೋಷಣೆ ಇಲ್ಲದೇ ಕಳೆ ಕುಂದುತ್ತಿವೆ.


ಮನುಷ್ಯನಿಗೆ ನೀರಿನ ಕೊರತೆಯಾದಲ್ಲಿ ಎಲ್ಲಾದರೂ ಅಲೆದು ನೀರಿನ ದಾಹ ತಣಿಸಿಕೊಳ್ಳಬಹುದು. ಆದರೆ ಸಸ್ಯಗಳು, ಗಿಡ, ಮರಗಳು ಎಲ್ಲಿಗೆ ಹೋಗಬೇಕು? ಉದ್ಯಾನವನ ನಿರ್ವಹಣೆ ಮಾಡಬೇಕಿದ್ದ ಪುರಸಭೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ.
                - ವೀರೇಶ ದೊಡ್ಡಣ್ಣವರ,
                ರೋಣ ಶಿವಪೇಟೆ ನಿವಾಸಿ   

ಉದ್ಯಾನವನ ಸಸ್ಯಗಳು ನೀರು, ಗೊಬ್ಬರದ ಕೊರತೆಯಿಂದ ಒಣಗುತ್ತಿರುವ ಕುರಿತು ನನಗೆ ಮಾಹಿತಿಯಿಲ್ಲ. ಕೂಡಲೇ ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಸಾರ್ವಜನಿಕರಿಗೆ, ವಾಯುವಿಹಾರಿಗಳಿಗೆ
ತೊಂದರೆಯಾಗದಂತೆ ಉದ್ಯಾನವನ ಪಾಲನೆ
ಮಾಡಲಾಗುವುದು.
                     - ಆರ್.ಎಂ. ಪಾಟೀಲ,
                ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿ
ಉದ್ಯಾನವನದ ನಿರ್ವಹಣೆಗೆ ಶಾಶ್ವತ ಪರಿಹಾರ ನೀಡುವಲ್ಲಿ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು. ಸದ್ಯ ನೀರಿನ ಸಮಸ್ಯೆ ಕುರಿತು ತಿಳಿದು ಬಂದಿದ್ದು, ಪರಿಹರಿಸಲಾಗುವದು. ವನಪಾಲಕ ಸಿಬ್ಬಂದಿಯ ಸಂಬಳ ನೀಡುವಲ್ಲಿ ಪುರಸಭೆಯ ಯಾವ ಅನುದಾನದಲ್ಲಿ ಖರ್ಚು ಹಾಕಬೇಕು ಎಂಬ ಗೊಂದಲವಿದೆ. ಸರ್ವ ಸದಸ್ಯರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು.
                   - ಮುತ್ತಣ್ಣ ಸಂಗಳದ,
         ರೋಣ ಪುರಸಭೆಯ ಅಧ್ಯಕ್ಷ

 ಪಿ.ಎಸ್. ಪಾಟೀಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement