ರೈತರ ಪರಿಹಾರದ 6 ಚೆಕ್ ಮಾಯ
ಕನ್ನಡಪ್ರಭ ವಾರ್ತೆ, ನರಗುಂದ, ಜು. 2
ತಾಲೂಕಿನಲ್ಲಿ ಮಹಿಕೋ ಕನಕ ಬಿಟಿ ಹತ್ತಿ ಬಿತ್ತನೆ ಮಾಡಿ ಕೈಸುಟ್ಟುಕೊಂಡ ರೈತರಿಗೆ ಹೋರಾಟದ ಪರಿಣಾಮ ಕಂದಾಯ ಇಲಾಖೆಯ ಮೂಲಕ ಪರಿಹಾರದ ಚೆಕ್ ವಿತರಿಸಲಾಗಿತ್ತು. ಈ ಪೈಕಿ ಆರು ಚೆಕ್‌ಗಳು ಅರ್ಹ ರೈತರಿಗೆ ಸಿಗುವ ಮೊದಲೇ ಮಾಯವಾಗಿವೆ.
ಮಲಪ್ರಭಾ ಜಲಾಶಯದ ನೀರಾವರಿ ಕಾಲುವೆಗಳಿಗೆ ಹೊಂದಿಕೊಂಡಿರುವ ರೈತರು ತಮ್ಮ ಜಮೀನುಗಳಲ್ಲಿ ಬಿಟಿ ಕನಕ ಹತ್ತಿಯನ್ನು ಬಿತ್ತನೆ ಮಾಡಿದ್ದರು. ಬೀಜಗಳು ನಕಲಿಯಾಗಿದ್ದರಿಂದ ಸಾಕಷ್ಟು ರೈತರು ನಷ್ಟ ಅನುಭವಿಸಿದ್ದರು. ರೈತರಿಗೆ ಸರ್ಕಾರ ಕಂದಾಯ ಇಲಾಖೆ ಮೂಲಕ ಚೆಕ್ ನೀಡಿತ್ತು. ಈಗ ಇಲಾಖೆಯಲ್ಲೇ ಆರು ಚೆಕ್‌ಗಳು ಮಾಯವಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.
ಚೆಕ್ ಮಾಯವಾಗಿದ್ದು ಹೇಗೆ?
ಬಿಟಿ ಕನಕ ಹತ್ತಿ ಬಿತ್ತಿ ನಷ್ಟ ಅನುಭವಿಸಿದ ರೈತರಿಗೆ ಪ್ರತಿ ಹೆಕ್ಟೇರ್‌ಗೆ ರು. 6 ಸಾವಿರದಂತೆ ಸರ್ಕಾರ ರು. 5.52 ಲಕ್ಷ ಪರಿಹಾರ ನೀಡಿದೆ. ನರಗುಂದ ತಾಲೂಕಿನ 220 ರೈತರಿಗೆ ರು. 2.20 ಲಕ್ಷ ಪರಿಹಾರ ಮಂಜೂರಾಗಿದೆ. ಆದರೆ, ತಹಸೀಲ್ದಾರ್ ಸಹಿ ನಕಲಿ ಮಾಡಿ ಆರು ಚೆಕ್ ಎಗರಿಸಲಾಗಿದೆ ಎಂಬುದು ಸಾರ್ವಜನಿಕರ ಆರೋಪ.
ಕ್ರಿಮಿನಲ್ ಮೊಕದ್ದಮೆ
ಹನುಮಂತಗೌಡ ಶಂಕರಗೌಡ ಪಾಟೀಲ ಎಂಬುವರ ಹೆಸರಿನಲ್ಲಿ ರು. 9,250ರ ಚೆಕ್ ಚಿತ್ರದುರ್ಗದ ಚಳ್ಳಕೇರಿ ಸಹ್ಯಾದ್ರಿ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್‌ನಿಂದ ನವೀಕರಣಗೊಂಡು ನರಗುಂದ ಯೂನಿಯನ್ ಬ್ಯಾಂಕಿಗೆ ಡ್ರಾ ಮಾಡಲು ಬಂದಾಗ ಬ್ಯಾಂಕಿನ ವ್ಯವಸ್ಥಾಪಕರಿಗೆ ಸಂದೇಹ ಬಂದು, ತಹಸೀಲ್ದಾರ್‌ಗೆ ಮಾಹಿತಿ ನೀಡಿದ್ದಾರೆ. ಅವರು ಪರಿಶೀಲಿಸಿ, ಇದು ತಮ್ಮ ಸಹಿಯಲ್ಲ. ಮೇಲಾಗಿ ತಮ್ಮ ಚೆಕ್ ಬುಕ್‌ನಿಂದ ಆರು ಚೆಕ್‌ಗಳು ಮಾಯವಾಗಿವೆ. ಈ ಪೈಕಿ ಇದೂ ಒಂದು ಚೆಕ್ ಎಂದು ತಿಳಿಸಿದ್ದಲ್ಲದೆ, ನರಗುಂದ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ಕಾಣದ ಕೈಗಳು ಶಾಮೀಲು
ರೈತರಿಗೆ ಪರಿಹಾರ ಹಂಚಿಕೆ ಮಾಡುವ ಪೂರ್ವದಲ್ಲಿ ಕಂದಾಯ ಇಲಾಖೆಯಿಂದ 6 ಚೆಕ್‌ಗಳು ಮಾಯವಾದರೆ ಹೇಗೆ? ಉಳಿದ 5 ಚೆಕ್‌ಗಳು ಎಲ್ಲಿವೆ? ಕಚೇರಿ ಸಿಬ್ಬಂದಿ ಕೈವಾಡವಿಲ್ಲದೆ ಹೇಗೆ ಮಾಯವಾದವು? ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಬಂಧಿಸುವಂತೆ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಬಸವರಾಜ ಸಾಬಳೆ ಆಗ್ರಹಿಸಿದ್ದಾರೆ.
ಕ್ರಿಮಿನಲ್ ಮೊಕದ್ದಮೆ...
ಗ್ರಾಮ ಲೆಕ್ಕಾಧಿಕಾರಿಗಳಿಗೆ ಪರಿಹಾರದ ಚೆಕ್ ನೀಡಲು ಸೂಚಿಸಲಾಗಿತ್ತು. ಆದರೆ ನಮ್ಮ ಇಲಾಖೆಯಿಂದ 6 ಚೆಕ್‌ಗಳು ಮಾಯವಾಗಿರುವ ಕುರಿತು ಗಮನಕ್ಕೆ ಬಂದಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದೇವೆ.
- ಎಚ್.ಡಿ. ನಾಗಾವಿ, ತಹಸೀಲ್ದಾರ್
ಎಸ್.ಜಿ. ತೆಗ್ಗಿನಮನಿ