ಆಸ್ಪತ್ರೆ ದುಸ್ಥಿತಿ: ಕರವೇ ಪ್ರತಿಭಟನೆ
ಲಕ್ಷ್ಮೇಶ್ವರ: ಪಟ್ಟಣದ ಸರ್ಕಾರಿ ಆಸ್ಪತ್ರೆಯು ದುವಾರ್ಸನೆಯಿಂದ ತುಂಬಿ ಹೋಗಿದ್ದು, ಇದು ಸಾರ್ವಜನಿಕರ ಆರೋಗ್ಯದ ಮೇಲೆ ಸಾಕಷ್ಟು ಗಂಭೀರ ಪರಿಣಾಮ ಬೀರುತ್ತಿದೆ. ಅಲ್ಲದೇ ಶೀಘ್ರವಾಗಿ ಆಸ್ಪತ್ರೆಯ ಸ್ಥಿತಿಯನ್ನು ಸುಧಾರಣೆ ಮಾಡಬೇಕು ಎಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಪಟ್ಟಣದ ಸರ್ಕಾರಿ ಆಸ್ಪತ್ರೆ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಸಾರ್ವಜನಿಕರ ರೋಗ ರುಜಿನಗಳನ್ನು ದೂರ ಮಾಡಬೇಕಾಗಿದ್ದ ಪಟ್ಟಣದ ಸರ್ಕಾರಿ ಆಸ್ಪತ್ರೆಯು ಈಗ ರೋಗಗ್ರಸ್ತವಾಗುತ್ತಿದೆ. ಪಟ್ಟಣದ ಸುತ್ತ ಮುತ್ತಲಿನ ಹಲವಾರು ಗ್ರಾಮಗಳ ಬಡ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯು ಅವಶ್ಯವಾಗಿತ್ತು. ಪ್ರಸ್ತುತ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರು ಇದ್ದು, ಪ್ರತಿದಿನ ಆಸ್ಪತ್ರೆಗೆ ಬರುವ ಸಾವಿರಾರು ರೋಗಿಗಳನ್ನು ಸರಿಯಾದ ರೀತಿಯಲ್ಲಿ ಶೂಶ್ರಷೆ ಮಾಡಲು ಆಗುತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಶರಣು ಗೋಡಿ ದೂರಿದರು.
ತಾಲೂಕು ವೈದ್ಯಾಧಿಕಾರಿ ಶ್ರೀಕಾಂತ ಖಾಟೆವಾಲೆ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಆಸ್ಪತ್ರೆಯ ಸ್ವಚ್ಛತೆಯ ಬಗ್ಗೆ ಶೀಘ್ರವಾಗಿ ಗಮನ ಹರಿಸಲಾಗುತ್ತದೆ. ವೈದ್ಯರ ಕೊರತೆಯ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗಿದ್ದು, ಇನ್ನು ಹೆಚ್ಚಿನ ವೈದ್ಯರನ್ನು ನೇಮಿಸುವಂತೆ ಕೋರಲಾಗಿದೆ. ಇನ್ನುಳಿದ ಸಮಸ್ಯೆಗಳನ್ನು ತೀವ್ರವಾಗಿ ಬಗೆಹರಿಸಲಾಗುವುದು ಎಂದು ಹೇಳಿದರು.
ನಾಗೇಶ ಅಮರಾಪುರ, ಗಣೇಶ ಕುಂಬಾರ, ರಾಜು ಖರಾಟೆ, ಸಂತೋಷ ಗಜಾಕೋಶ, ಪ್ರಕಾಶ ಕೊಂಚಿಗೇರಿಮಠ, ಶಿರಾಜ ಡಾಲಾಯತ್, ಚೆನ್ನಬಸಯ್ಯ ಗಡ್ಡದೇವರಮಠ, ಫಕ್ಕೀರೇಶ ಶಿವಬಸಣ್ಣವರ, ಪ್ರಕಾಶ ಗೊಜನೂರ, ಶಂಕ್ರಯ್ಯ ಹಿರೇಮಠ, ನಿಂಗರಾಜ ಮನ್ನಂಗಿ, ಸುರೇಶ ಭಜಂತ್ರಿ ಹಾಜರಿದ್ದರು.