ಉತ್ತಮ ಸಮಾಜ: ಪತ್ರಿಕೆ ಪಾತ್ರ ಪ್ರಮುಖ
ಕನ್ನಡಪ್ರಭ ವಾರ್ತೆ, ಗದಗ, ಜು. 3
ಪತ್ರಿಕೆಯು ಸಹ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪತ್ರಿಕೆಯ ಪಾತ್ರ ಪ್ರಮುಖ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹೇಳಿದರು.
ಅವರು ಗುರುವಾರ ವೀರೇಶ್ವರ ಪುಣ್ಯಾಶ್ರಮದಲ್ಲಿ ಗದಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ಕರ್ನಾಟಕ ರಾಜ್ಯ ಜರ್ನಲಿಸ್ಟ್ ಯೂನಿಯನ್) ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪತ್ರಿಕಾ ರಂಗ ಸಮಾಜವನ್ನು ತಿದ್ದುವ ಕಾರ್ಯ ಮಾಡುತ್ತಿದೆ. ಸಮಾಜದಲ್ಲಿ ಆಗುಹೋಗುವ ಘಟನಾವಳಿಗಳನ್ನು ಪತ್ರಿಕೆಯ ಮೂಲಕ ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡುತ್ತಿರುವ ಪತ್ರಿಕಾ ರಂಗದ ಕಾರ್ಯ ಶ್ಲಾಘನೀಯ.
ಕೇವಲ ದಿನವನ್ನು ಆಚರಿಸದೇ ಜಿಲ್ಲೆಯ ಹಿರಿಯ ಹಾಗೂ ತಾಲೂಕು ಪತ್ರಕರ್ತರು ಮತ್ತು ಹಿರಿಯ ಪತ್ರಿಕಾ ವಿತರಕರನ್ನು ಗುರುತಿಸಿ ಅವರನ್ನು ಸನ್ಮಾನಿಸಿರುವುದು ಸಂತಸ ಮೂಡಿಸಿದೆ. ಮುಂಬರುವ ದಿನಗಳಲ್ಲಿ ಜಿಲ್ಲಾಡಳಿತದಿಂದ ಪತ್ರಕರ್ತರಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಈಡೇರಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ ಮಾತನಾಡಿ, ಸಮಾಜವನ್ನು ತಿದ್ದುವ, ನಮ್ಮ ಸುತ್ತಮುತ್ತಲೂ ಆಗಿರುವ ಘಟನೆಗಳನ್ನು ಕ್ಷಣಮಾತ್ರದಲ್ಲಿಯೇ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವ ಪತ್ರಕರ್ತರ ಕಾರ್ಯ ಇತರರಿಗೆ ಮಾದರಿಯಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಪತ್ರಕರ್ತರಲ್ಲದವರಲ್ಲಿಯೂ ಸಹ ಪತ್ರಕರ್ತರ ಗುರುತಿನ ಚೀಟಿ ಇರುವ ಕುರಿತು ಹಾಗೂ ಖಾಸಗಿ ವಾಹನಗಳ ಮೇಲೆ ಅನಧಿಕೃತರೂ ಸಹ ಪ್ರೆಸ್ ಎಂದು ಹಾಕಿಕೊಂಡು ಸಂಚರಿಸುವವರ ಸಂಖ್ಯೆ ಹೆಚ್ಚಾಗಿರುವ ಕುರಿತು ಪತ್ರಕರ್ತರು ಗಮನಕ್ಕೆ ತಂದಿದ್ದು, ಈ ಕುರಿತು ಸೂಕ್ತವಾಗಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇಲಾಖೆಯಿಂದ ಪ್ರತ್ಯೇಕವಾಗಿ ಪತ್ರಕರ್ತರಿಗೆ ಗುರುತಿನ ಚೀಟಿ ನೀಡುವ ಕುರಿತು ಚರ್ಚಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಿಇಓ ವೀರಣ್ಣ ತುರಮರಿ, ಸಂಘದ ರಾಜ್ಯಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ನರೇಂದ್ರನಾಥ, ಜಿಲ್ಲಾಧ್ಯಕ್ಷ ಮಂಜುನಾಥ ಬೊಮ್ಮನಕಟ್ಟಿ, ಪತ್ರಕರ್ತ ಶಿವಕುಮಾರ ಕುಷ್ಟಗಿ ಮುಂತಾದವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಹಿರಿಯ ಜಿಲ್ಲಾ, ತಾಲೂಕು ಪತ್ರಕರ್ತರನ್ನು, ಛಾಯಾಗ್ರಾಹಕರನ್ನು ಹಾಗೂ ಹಿರಿಯ ಪತ್ರಿಕಾ ವಿತರಕರನ್ನು ಸನ್ಮಾನಿಸಲಾಯಿತು. ವೆಂಕಟೇಶ ಇಮ್ರಾಪುರ ಸ್ವಾಗತಿಸಿದರು. ರಾಜು ಹೆಬ್ಬಳ್ಳಿ ನಿರೂಪಿಸಿದರು. ನೂರಅಹ್ಮದ್ ಮಕಾನದಾರ ವಂದಿಸಿದರು.