ಪಿಯು ಪೂರಕ ಪರೀಕ್ಷೆ: ಸಿಕ್ಕಿಬಿದ್ದ ನಕಲಿ ವಿದ್ಯಾರ್ಥಿ
ಗದಗ: ಬೇರೊಬ್ಬರ ಹೆಸರಿನಲ್ಲಿ ಪಿಯು ಪೂರಕ ಪರೀಕ್ಷೆ ಬರೆಯುತ್ತಿರುವ ಸಂದರ್ಭದಲ್ಲಿ ಪರೀಕ್ಷೆ ಸಿಬ್ಬಂದಿಗೆ ಸಿಕ್ಕಿಹಾಕಿಕೊಂಡ ಘಟನೆ ಗುರುವಾರ ನಗರದ ನಗರಸಭೆಯ ಸಂಯುಕ್ತ ಪಪೂ ಕಾಲೇಜಿನಲ್ಲಿ ಜರುಗಿದೆ. ಗುರುವಾರ ಬೆಳಗ್ಗೆ ಸಮಾಜಶಾಸ್ತ್ರ ವಿಷಯದ ಪರೀಕ್ಷೆ ಇತ್ತು. ಈ ಸಂದರ್ಭದಲ್ಲಿ ಕುರ್ತಕೋಟಿಯ ಸರ್ಕಾರಿ ಪಪೂ ಕಾಲೇಜಿನ ವಿದ್ಯಾರ್ಥಿ ಮಹಮ್ಮದಸಾಬ್ ನಮಾಜಿ ಎಂಬ ವಿದ್ಯಾರ್ಥಿಯ ಹೆಸರಿನಲ್ಲಿ ವಿನೋದ ಹರಕಟ್ಟಿ ಎಂಬ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿದ್ದನು.
ಪರೀಕ್ಷಾ ಸಿಬ್ಬಂದಿ ವಿಚಾರಿಸಿದಾಗ ತಾನು ಮಹಮ್ಮದಸಾಬ್ ನಮಾಜಿ ಎಂಬ ವಿದ್ಯಾರ್ಥಿಯ ಹೆಸರಿನ ಮೇಲೆ ಪರೀಕ್ಷೆ ಬರೆಯಲು ಬಂದಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. ಕೂಡಲೇ ನಕಲಿ ವಿದ್ಯಾರ್ಥಿಯನ್ನು ಬಂಧಿಸಿ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಸ್. ಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.