ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಧಗ್ರಾ ಯೋಜನೆಯಿಂದ ಗ್ರಾಮಾಭಿವೃದ್ಧಿ

Mainashree
Updated On : 5 Jul 2014, 10:00 am

ಕನ್ನಡಪ್ರಭ ವಾರ್ತೆ, ಗದಗ, ಜು. 4
ಗ್ರಾಮೀಣರ ಜೀವನದಲ್ಲಿ ಪರಿವರ್ತನೆ ತರುವುದೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಧ್ಯೇಯವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶುಕ್ರವಾರ ನಗರದ ಪಾರ್ಶ್ವನಾಥ ಆಂಗ್ಲ ಮಾಧ್ಯಮ ಶಾಲೆಯ ಬಳಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಮತ್ತು ತಾಲೂಕು ಯೋಜನಾ ಕಚೇರಿಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತವು ಸ್ವಾತಂತ್ರ್ಯಾ ನಂತರ ಅಭಿವೃದ್ಧಿ ಹೊಂದಿದೆಯಾದರೂ ಅಂದುಕೊಂಡಷ್ಟು ಸಾಧಿಸಲು ಆಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರಿಗಾಗಿ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿ ಗ್ರಾಮೀಣ  ಮಹಿಳೆಯರಲ್ಲಿಯೂ ಆತ್ಮಾಭಿಮಾನ ತುಂಬುವ ಕಾರ್ಯ ಮಾಡುತ್ತಿದೆಯಾದರೂ ಸರ್ಕಾರದ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪುವಲ್ಲಿ ಹಿನ್ನಡೆಯಾಗುತ್ತಿದೆ. ಇದಕ್ಕೆ ಮಾಹಿತಿ ಕೊರತೆಯೇ ಪ್ರಮುಖ ಕಾರಣ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಮಹಿಳೆಯರಿಗಾಗಿಯೇ ಪ್ರಾಶಸ್ತ್ಯ ನೀಡುವ ಮೂಲಕ ಮಹಿಳೆಯರಲ್ಲಿಯೂ ಸ್ವಾವಲಂಬನೆ ಬೀಜ ಬಿತ್ತುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಅದರಲ್ಲಿಯೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿಯೂ ಮಹಿಳಾ ಸ್ವಸಹಾಯ ಗುಂಪುಗಳನ್ನು ರಚನೆ ಮಾಡಿ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿ, ಪುರುಷರಷ್ಟೇ ಮಹಿಳೆಯರು ಸಮಾನರು ಎಂಬ ಆತ್ಮಸ್ಥೈರ್ಯವನ್ನು ತುಂಬುವ ಕಾರ್ಯ ಕೈಗೊಳ್ಳಲಾಗುತ್ತಿದೆ.
ರಾಜ್ಯಾದ್ಯಂತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸ್ವಸಹಾಯ ಗುಂಪುಗಳಿಂದ 32 ಲಕ್ಷ ಮಹಿಳೆಯರು ಸದಸ್ಯತ್ವ ಹೊಂದಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಉಡುಪಿ, ಬೆಳಗಾವಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಂಸ್ಥೆಯ ವತಿಯಿಂದ ನೀಡಿರುವ ಸಾಲಕ್ಕೆ ಶೇ. 100ಕ್ಕೆ 99.99ರಷ್ಟು ವಸೂಲಾತಿ ಪ್ರಕ್ರಿಯೆ ನಿರಂತರವಾಗಿದೆ. ಗದಗ ಜಿಲ್ಲೆಯಲ್ಲಿಯೂ ಸಾಲ ವಸೂಲಾತಿ ಪ್ರಗತಿಯಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ಇಂದು ಉದ್ಘಾಟನೆಗೊಂಡಿರುವ ಈ ಯೋಜನಾ ಕಚೇರಿಯು ಜಿಲ್ಲೆಯಲ್ಲಿನ ಮಹಿಳೆಯರು ಸೂಕ್ತ ಸಾಲ ಸೌಲಭ್ಯ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸುವ ಮೂಲಕ ಆರ್ಥಿಕ ಪ್ರಗತಿ ಕಾಣುವಂತೆ ಹಾರೈಸಿದರು.
ವೀರೇಂದ್ರ ಹೆಗ್ಗಡೆ ಪ್ರೇರಣೆ
ಅಧ್ಯಕ್ಷತೆ ವಹಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಗದಗ ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಬೇಕಾದ ಕಾರಣ ಹುಡುಕುವ ಸಂದರ್ಭದಲ್ಲಿ ಡಾ. ವೀರೇಂದ್ರ ಹೆಗ್ಗಡೆ ಅವರು ಸ್ಥಾಪಿಸಿದ ಶುದ್ಧ ನೀರಿನ ಘಟಕಗಳಿಂದ ಪ್ರೇರಿತನಾಗಿ ಕೆ.ಎಚ್. ಪಾಟೀಲ ಪ್ರತಿಷ್ಠಾನದಿಂದ ಶುದ್ಧ ನೀರಿನ ಘಟಕಗಳನ್ನು ತೆರೆಯಲಾಗಿದೆ. ಅಲ್ಲದೇ ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಉದ್ದೇಶ ಹೊಂದಿದ್ದು, ರಾಜ್ಯದ ಗದಗ, ಕೊಪ್ಪಳ, ಮೈಸೂರು, ತುಮಕೂರು, ಕಾರವಾರ ಈ 5 ಜಿಲ್ಲೆಗಳಲ್ಲಿನ ಮಹಿಳೆಯರು ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಪಡೆದುಕೊಂಡಲ್ಲಿ ಅಂತಹ ಮಹಿಳೆಯರು ಶೇ. 4 ರಷ್ಟು ಮಾತ್ರ ಬಡ್ಡಿಯನ್ನು ಬ್ಯಾಂಕ್‌ಗೆ ತುಂಬಬಹುದಾಗಿದ್ದು, ಉಳಿದ ಹೆಚ್ಚಿನ ಬಡ್ಡಿಯನ್ನು ಸರ್ಕಾರವೇ ಭರಿಸಲಿದ್ದು, ಈ ಯೋಜನೆ ಇನ್ನು ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ ಎಂದರು.
ಸಂಸ್ಥೆ ಕಾರ್ಯ ಶ್ಲಾಘನೀಯ
ಅತಿಥಿಗಳಾಗಿ ಆಗಮಿಸಿದ್ದ ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಸರ್ಕಾರವು ಮಾಡುವ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡೆಸುತ್ತಿರುವುದು ಅಭಿನಂದನಾರ್ಹ. ಇದು ರಾಜ್ಯಕ್ಕೆ ಮಾದರಿಯಾಗಿದೆ. ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಮಹಿಳೆಯರಲ್ಲಿಯೂ ಆತ್ಮಸ್ಥೈರ್ಯ ತುಂಬುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. ಶಾಸಕ ಬಿ.ಆರ್. ಯಾವಗಲ್ ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಹಲವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ, ನಗರಸಭೆ ಅಧ್ಯಕ್ಷೆ ರುದ್ರವ್ವ ಕೆರಕಲಮಟ್ಟಿ, ಉಪಾಧ್ಯಕ್ಷ ಕೃಷ್ಣ ಪರಾಪುರ, ಸದಸ್ಯ ಅನಿಲ ಗರಗ, ಈಶ್ವರಸಾ ಮೇರವಾಡೆ, ಭೂಷಣಕುಮಾರ ಶಾ, ಕೆ. ಬೂದಪ್ಪಗೌಡ, ಜಯಂತ ಪೂಜಾರಿ, ಸಂಜೀವ ನಾಯಕ, ಬಸಣ್ಣ ಮಲ್ಲಾಡದ, ಜಯಶಂಕರ ಶರ್ಮಾ ಉಪಸ್ಥಿತರಿದ್ದರು.  ಜಯದೇವ ಮೆಣಸಗಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement