ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಳೆಗಾಗಿ ಭಜನಾ ಸಪ್ತಾಹ

Mainashree
Updated On : 5 Jul 2014, 9:59 am

ಪಿ.ಎಸ್. ಪಾಟೀಲ
ಕನ್ನಡಪ್ರಭ ವಾರ್ತೆ ರೋಣ, ಜು. 4
ಕೈಯಲ್ಲಿ ತಾಳ ಹಿಡಿದು ಶಿವಾಯ ನಮಃ... ಶಿವಾಯ ನಮಃ... ಶಿವಾಯ ನಮಃ ಎಂಬ ಪಂಚಾಕ್ಷರ ಮಂತ್ರ ಪಠಣ, ಶಿಸ್ತಿನ ಸಿಪಾಯಿಯಂತೆ ಸಮಯಕ್ಕೆ ತಕ್ಕಂತೆ ಯುವಕರು, ವೃದ್ಧರೆನ್ನದೆ, ತೊಯ್ದ ಬಟ್ಟೆಯೊಂದಿಗೆ ನಿಂತುಕೊಂಡೆ 24್ಢ7 ಭಜನಾ ಸಪ್ತಾಹದಲ್ಲಿ ಶಿವನಾಮ ಜಪ ಮಾಡುತ್ತಿದ್ದಾರೆ.
ತಾಲೂಕಿನ ಬಾಸಲಾಪುರ ಗ್ರಾಮಸ್ಥರು ಸತತ ಮಳೆ ಕೊರತೆಯಿಂದ ತಾಲೂಕಿಗೆ ಬಂದಪ್ಪಳಿಸಿದ ಭೀಕರ ಬರದ ಛಾಯೆಗೆ ತತ್ತರಿಸಿ, ಗ್ರಾಮದ ಆರಾಧ್ಯದೈವ ವೀರಭದ್ರೇಶ್ವರ ಸನ್ನಿಧಿಯಲ್ಲಿ ಕಳೆದ ಮಂಗಳವಾರ (ಜು. 1)ದಿಂದ ಅಹೋರಾತ್ರಿ ಭಜನೆ ಸಪ್ತಾಹ ಮೂಲಕ ದೇವರಲ್ಲಿ ಮೊರೆ ಹೋಗಿದ್ದಾರೆ.
ಭಜನಾ ಸಪ್ತಾಹ: ಮಳೆರಾಯನ ಕೃಪೆಗಾಗಿ 7 ದಿನಗಳ ನಿರಂತರ ನಡೆಸಲಾಗುವ ಭಜನಾ ಸಪ್ತಾಹ (ದೇವರ ನಾಮ ಜಪ) ಇದಾಗಿದೆ. ಧಾರ್ಮಿಕ ಸಪ್ತಾಹ ಭಜನಾ ಕಾರ್ಯದಲ್ಲಿ ಸ್ವ-ಇಚ್ಛೆಯಿಂದ ಗ್ರಾಮಸ್ಥರು ಭಾಗವಹಿಸುತ್ತಿದ್ದಾರೆ.
 ಅಹೋರಾತ್ರಿ ನಿರಂತರ ನಡೆಯುವ ಭಜನೆಯಲ್ಲಿ ಭಾಗವಹಿಸಲು ಒಟ್ಟು 12 ತಂಡಗಳನ್ನಾಗಿ ಮಾಡಲಾಗಿದ್ದು, ಒಂದು ತಂಡದಲ್ಲಿ 10ರಿಂದ 15 ಜನರಿರುತ್ತಾರೆ. ಒಂದು ತಂಡ 3 ತಾಸಿಗೊಮ್ಮೆ ಬದಲಾಗುತ್ತದೆ. ಪ್ರತಿ 3 ತಾಸಿಗೊಂದರಂತೆ ತಂಡದ ಸದಸ್ಯರು ಸ್ವ-ಇಚ್ಛೆಯಿಂದ ಬಂದು ಸೇವಾ ಕೈಂಕರ್ಯದಲ್ಲಿ ತೊಡಗಿ ದೇವರನ್ನು ಪ್ರಾರ್ಥಿಸುತ್ತಿದ್ದಾರೆ.
ಕಠಿಣ ಸ್ಮರಣೆ: ಹಗಲು ರಾತ್ರಿ ಎನ್ನದೆ ದಿನದ 24 ಗಂಟೆಗಳವರೆಗೆ ಭಜನೆಯಲ್ಲಿ ನಿರತರವಾಗಿ ಯಾರೊಬ್ಬರು ಕುಳಿತುಕೊಳ್ಳುವಂತಿಲ್ಲ. ಅರ್ಧಕ್ಕೆ ಬಿಟ್ಟು ಹೋಗುವುದಾಗಲಿ, ವಿಶ್ರಾಂತಿ ಪಡೆಯುವುದಾಗಲಿ ಮತ್ತು ಬೇರೆಯವರೊಂದಿಗೆ ಮಾತನಾಡುವದಾಗಲಿ, ಅಸಹ್ಯಕರವಾಗಿ ನಿಲ್ಲದಂತೆ ನೀಟಾಗಿ ಕಾಲು ಜೋಡಿಸಿಕೊಂಡು,ನಿಂತ ಜಾಗದಿಂದ ಕದಲದಂತೆ 3 ತಾಸುಗಳವರೆಗೆ ದೇವರ ಭಜಿಸುವ ಕಠಿಣ ರೀತಿಯಲ್ಲಿ ಪ್ರಾರ್ಥಿಸಲಾಗುತ್ತಿದೆ.
8ರಂದು ಕ್ಷೀರ ಮತ್ತು ರುದ್ರಾಭಿಷೇಕ: ಜು. 8ರಂದು ಬೆಳಗ್ಗೆ 6 ಗಂಟೆಗೆ ಭಜನಾ ಸಪ್ತಾಹ ಮುಕ್ತಾಯಗೊಳ್ಳಲಿದ್ದು, ಬೆಳಗ್ಗೆ ಗ್ರಾಮ ದೇವರಾದ ವೀರಭದ್ರೇಶ್ವರನಿಗೆ ಗ್ರಾಮದ ಪ್ರತಿಯೊಂದು ಮನೆಯಿಂದ ಹಾಲನ್ನು ತಂದು ಕ್ಷೀರಾಭಿಷೇಕ ಮತ್ತು ರುದ್ರಾಭಿಷೇಕ ಮಾಡಲಾಗುವುದು. ಬಳಿಕ ಗ್ರಾಮದಾದ್ಯಂತ 501 ಮುತ್ತೈದೆಯರಿಂದ ಕುಂಭಮೇಳ ಹಾಗೂ ವೀರಭದ್ರ ದೇವರ ಪಲ್ಲಕ್ಕಿ ಮೆರವಣಿಗೆ ಜರುಗಲಿದೆ. ಭಕ್ತ ಸಮೂಹಕ್ಕೆ ಅನ್ನಸಂತರ್ಪಣೆ ವ್ಯವಸ್ಥೆಯಿದೆ. ಬದಾಮಿಯ ನವಗ್ರಹ ಹಿರೇಮಠದ ಶಿವಪೂಜಾ ಶಿವಾಚಾರ್ಯರರು, ಪಟ್ಟಣದ ಗುಲಗಂಜಿ ಮಠದ ಗುರುಪಾದ ಸ್ವಾಮಿಜಿ, ಅಬ್ಬಿಗೇರಿಯ ಸೋಮಶೇಖರ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಗ್ರಾಮದ ಮುಖಂಡರಾದ ರುದ್ರಗೌಡ ಜುಂಜನಗೌಡ್ರ, ಬಸವಂತಪ್ಪ ಸಂಗಮದ, ಶಿವಶಂಕ್ರಪ್ಪ ಜಾಲಿಹಾಳ, ಸಂಗಯ್ಯ ರಾಟಿಮನಿ ಕನ್ನಡಪ್ರಭಕ್ಕೆ ತಿಳಿಸಿದರು.
ಅಲ್ಲಲ್ಲಿ ಮಳೆಗಾಗಿ ಪ್ರಾರ್ಥನೆ
4 ವರ್ಷಗಳಿಂದ ಅನಿಶ್ಚಿತ ಮಳೆಯಿಂದಾಗಿ ಸತತ ಬರದ ಭೀಕರತೆ ಅನುಭವಿಸಿ, ಕಂಗಾಲಾದ ತಾಲೂಕಿನ ರೈತ ಸಮುದಾಯ ಮಳೆಗಾಗಿ ಹಲವು ಪೂಜೆ, ಪ್ರಾರ್ಥನೆ, ಆರಾಧನೆಯಲ್ಲಿ ತೊಡಗಿದ್ದಾರೆ.
ಅದರಂತೆ ತಾಲೂಕಿನಲ್ಲಿ ಈಗಾಗಲೇ ಗುರ್ಜಿಯಾಟ, ಕಪ್ಪೆ, ಕತ್ತೆ ಮದುವೆ, ಮಹಿಳೆಯರಿಂದ ಕುಂಭ ಮೆರವಣಿಗೆ, ಕಿಳ್ಳಿಕ್ಯಾತರ ಆಟ, ದೇವರಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಜಲಾಭಿಷೇಕ, ಮುತ್ತೈದೆಯರ ಉಡಿ ತುಂಬುವುದು, ಉಪವಾಸ ವ್ರತ, ಉರುಳು ಸೇವೆ, ದೀಡ್ ನಮಸ್ಕಾರ ವಿವಿಧ ರೀತಿಯ ಪೂಜಾ ವಿಧಾನ ಅನುಸರಿಸುತ್ತಿದ್ದಾರೆ.

ಮಳೆರಾಯ ನಿಜಕ್ಕೂ ಬೇಸರ ತಂದಿದ್ದಾನೆ. ಕಾರಹುಣ್ಣಿಮೆಯೊಳಗೆ ಮತ್ತು ನಂತರ ಮಳೆಯಾಗುತ್ತದೆ ಎಂಬ ಆಶಾಭಾವನೆಯಿತ್ತು, ಆದರೆ ಮಳೆ ಬರಲಿಲ್ಲ. ಮಳೆ ಬರುವಿಕೆಯಿಂದ ಒಣ ಮಣ್ಣಲ್ಲಿ ಹೆಸರು ಬಿತ್ತಲಾಗಿದೆ. ಸದ್ಯ ಈರುಳ್ಳಿ ಬಿತ್ತನೆಗೆ ತಯಾರಿ ನಡೆಸಲಾಗಿದ್ದು, ಮಳೆಯಾಗದ್ದರಿಂದ ನಿತ್ಯ ಮೋಡದತ್ತ ಮುಖ ಮಾಡುವಂತಾಗಿದೆ.
-ಪಾಲಾಕ್ಷಯ್ಯ ಹಿರೇಮಠ, ಸಂಗಯ್ಯ ಹಿರೇಮಠ,   ಶಂಕರಗೌಡ ನಿಂಗನಗೌಡ್ರ, ಬಸನಗೌಡ ಪಾಟೀಲ,      ಬಸವಂತಪ್ಪ ಸಂಗಮದ, ಬಾಸಲಾಪುರ ರೈತರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement