ರು. 5 ಕೋಟಿ ವೆಚ್ಚದಲ್ಲಿ ಜೋಡು ರಸ್ತೆ ನಿರ್ಮಾಣ
ಕನ್ನಡಪ್ರಭ ವಾರ್ತೆ, ರೋಣ, ಜು. 4
ಪಟ್ಟಣದ ಮುಖ್ಯರಸ್ತೆಗಳು ಇಕ್ಕಟ್ಟಾಗಿದ್ದು, ಜೋಡು ರಸ್ತೆಯನ್ನಾಗಿ ಪರಿವರ್ತನೆ ಮಾಡಲು ರು. 5 ಕೋಟಿ ಬಿಡುಗಡೆ ಮಾಡಲಾಗಿದೆ. ರೋಣ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದ್ದಾರೆ.
ಅವರು ಶುಕ್ರವಾರ ಪಟ್ಟಣದ ಪುರಸಭೆ (ಹಳೇ ತಹಸೀಲ್ದಾರ್ ಕಚೇರಿ ಕಟ್ಟಡ) ಆವರಣದಲ್ಲಿ ತಾಲೂಕು ಕಂದಾಯ ಇಲಾಖೆ ವತಿಯಿಂದ ನಡೆದ ಹೊಸ ಪಡಿತರ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಿಸಿ ಮಾತನಾಡಿದರು. ಈಗಾಗಲೇ ಪಟ್ಟಣದ ಆಯುರ್ವೇದ ಕಾಲೇಜಿನಿಂದ ಮುಲ್ಲಾನಬಾವಿ ವೃತ್ತದ ವರೆಗೆ ರು. 80 ಲಕ್ಷ ವೆಚ್ಚದಲ್ಲಿ ಜೋಡು ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೂಮಿಪೂಜೆ ನೆರವೇರಿಸಿದ್ದಾರೆ. ಕಾಮಗಾರಿ ಸದ್ಯದಲ್ಲಿಯೇ ಪ್ರಾರಂಭವಾಗಲಿದೆ ಎಂದರು.
ಇದಲ್ಲದೆ ಪಟ್ಟಣದ ಶಿವಾನಂದ ಮಠದಿಂದ ಸೂಡಿ ವೃತ್ತದ ವರೆಗೆ, ಬದಾಮಿ ರಸ್ತೆಯ ಸರ್ಕಾರಿ ಪದವಿ ಕಾಲೇಜಿನಿಂದ ಸೂಡಿ ವೃತ್ತದ ವರೆಗೆ ಮತ್ತು ಹೊಸ ತಹಸೀಲ್ದಾರ್ ಕಚೇರಿಯಿಂದ ವೀರಭದ್ರೇಶ್ವರ ದೇವಸ್ಥಾನದ ವರೆಗೆ ಜೋಡು ರಸ್ತೆ ನಿರ್ಮಾಣ ಮತ್ತು ಮಧ್ಯದಲ್ಲಿ ಬೀದಿ ದೀಪಗಳನ್ನು ಅಳವಡಿಸುವ ಯೋಜನೆ ಹಾಕಿಕೊಂಡಿದ್ದು, ಇದಕ್ಕಾಗಿ ರು. 5 ಕೋಟಿ ಬಿಡುಗಡೆ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಅದರ ನೀಲನಕ್ಷೆ ತಯಾರಿಸಿ, ವಿಳಂಬ ಮಾಡದೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು. ತಾಲೂಕಿನಲ್ಲಿ 53,345 ಕುಟುಂಬಗಳಿದ್ದು, ಅದರಲ್ಲಿ ಈಗಾಗಲೇ ಅಂತ್ಯೋದಯ, ಬಿಪಿಎಲ್, ಎಪಿಎಲ್ ಸೇರಿದಂತೆ 49 ಸಾವಿರ ಕುಟುಂಬಗಳಿಗೆ ಪಡಿತರ ಕಾರ್ಡ್ಗಳನ್ನು ವಿತರಿಸಲಾಗಿದೆ. ಆದರೂ ಇನ್ನೂ ಹೊಸದಾಗಿ 24 ಸಾವಿರ ಅರ್ಜಿಗಳು ಬಂದಿವೆ. ಅದರಲ್ಲಿ ಸದ್ಯ 4 ಸಾವಿರ ಕುಟುಂಬಗಳಿಗೆ ಹೊಸ ಕಾರ್ಡ್ ವಿತರಿಸಲಾಗುವುದು. ಇನ್ನುಳಿದ ಕಾರ್ಡ್ಗಳನ್ನು ಕೆಲವೇ ದಿನಗಳಲ್ಲಿ ವಿತರಣೆ ಮಾಡಲಾಗುವುದು. 4 ಸಾವಿರ ಕಾರ್ಡ್ಗಳಲ್ಲಿ ಈಗಾಗಲೇ ತಾಲೂಕಿನ ವಿವಿಧ ಗ್ರಾಮಗಳಲ್ಲಿ 2016 ಕಾರ್ಡ್ಗಳನ್ನು ವಿತರಿಸಿದೆ. ರೋಣ ಪಟ್ಟಣದಲ್ಲಿ 1512 ಹೊಸ ಕಾರ್ಡ್ಗಳನ್ನು ವಿತರಣೆ ಮಾಡಲಾಗುವುದು. ತಾಲೂಕಿನಲ್ಲಿ ಅರ್ಹ ಫಲಾನುಭವಿಗಳು ಪಡಿತರ ಕಾರ್ಡ್ಗಳಿಂದ ವಂಚಿತರಾಗಿದ್ದಲ್ಲಿ, ಅಂಥವರು ನೇರವಾಗಿ ತಹಸೀಲ್ದಾರ್ ಕಚೇರಿಗೆ ಬಂದು ವಿವರಣೆ ನೀಡಬೇಕು ಎಂದರು.
ತಹಸೀಲ್ದಾರ್ ಎ.ಜಿ. ಪಂಡಿತ್ ಮಾತನಾಡಿದರು. ವಿ.ಬಿ. ಸೋಮನಕಟ್ಟಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ, ಉಪಾಧ್ಯಕ್ಷೆ ಲಕ್ಷ್ಮೀ ಗಡಗಿ, ಮುಖ್ಯಾಧಿಕಾರಿ ಆರ್.ಎಂ. ಪಾಟೀಲ, ಸದಸ್ಯರಾದ ಶಿವಪ್ಪ ಕರಿಲಿಂಗಣ್ಣವರ, ಶರಣಪ್ಪ ದೊಡ್ಡಮನಿ, ಗದಿಗೆಪ್ಪ ಕಿರೇಸೂರ, ನಾಗರಾಜ ಪಲ್ಲೇದ, ಶರಣವ್ವ ಜಿಡ್ಡಿಬಾಗಿಲ, ಜಯಶ್ರೀ ನವಲಗುಂದ, ಬಾಬುಸಾಬ್ ಚಿನ್ನೂರ, ಅಜ್ಜಪ್ಪ ರಡ್ಡೇರ, ಗಂಗಮ್ಮ ಹಾದಿಮನಿ, ಲಕ್ಷ್ಮಣ್ಣ ಗೌಡನ್ನವರ, ಮಾಜಿ ಉಪಾಧ್ಯಕ್ಷ ಬಸವರಾಜ ನವಲಗುಂದ, ರಾಜಣ್ಣ ಹುಲಿ ಉಪಸ್ಥಿತರಿದ್ದರು. ಎಸ್.ಎಂ. ಸಂಕನಗೌಡ್ರ ಕಾರ್ಯಕ್ರಮ ನಿರೂಪಿಸಿದರು.