ಶಿಂಗಟಾಲೂರು ಏತ ನೀರಾವರಿ ಕಾಲುವೆ ಮಾರ್ಗ ಬದಲಿಸಲು ಆಗ್ರಹ
ಗದಗ: ತಾಲೂಕಿನ ಅಡವಿಸೋಮಾಪುರ ಗ್ರಾಮದ ಬಳಿ ಹಾಯ್ದು ಹೋಗುವ ಉದ್ದೇಶಿತ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಕಾಲುವೆ ಮಾರ್ಗವನ್ನು ಸುರಕ್ಷತೆಯ ಹಿತದೃಷ್ಟಿಯಿಂದ ಬದಲಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಗ್ರಾಮದ ಸಿದ್ದಲಿಂಗ ನಗರಕ್ಕೆ ಹೊಂದಿಕೊಂಡು ಯೋಜನೆಯ ಕಾಲುವೆ ಮಾರ್ಗವನ್ನು ರೂಪಿಸಲಾಗಿದೆ. ಇಲ್ಲಿನ ನಿವಾಸಿಗಳಿಗೆ ಅದರಲ್ಲೂ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿರುವ ಈ ಭಾಗದಲ್ಲಿ ಈ ರೀತಿಯ ಕಾಲುವೆ ನಿರ್ಮಿಸುವುದು ಅಪಾಯಕಾರಿಯಾಗಿದೆ. ಜತೆಗೆ ಸಮೀಪದ ಶಾಲೆಗೆ ಮಕ್ಕಳು ಬರುವುದರಿಂದ ಇನ್ನಷ್ಟು ಆತಂಕವಿದೆ. ಮುಂಜಾಗ್ರತಾ ಕ್ರಮವಾಗಿ ಕಾಮಗಾರಿಯ ಸಂದರ್ಭದಲ್ಲಿಯೇ ಮಾರ್ಗವನ್ನು ಬದಲಿಸುವುದು ಹೆಚ್ಚು ಸೂಕ್ತ. ಬೃಹತ್ ಪ್ರಮಾಣದ ಕಾಲುವೆ ನಿರ್ಮಾಣದ ಕಾರ್ಯವನ್ನು ಗ್ರಾಮದ ದಕ್ಷಿಣಕ್ಕೆ 1 ಕಿಮೀ ದೂರದ ನಿರ್ಜನ ಪ್ರದೇಶ ಇರುವಲ್ಲಿ ನಿರ್ಮಿಸಿದರೆ ಆತಂಕವಿಲ್ಲ ಅಥವಾ ಮಾರ್ಗ ಬದಲಿಸಲು ಸಾಧ್ಯವಾಗದಿದ್ದಲ್ಲಿ ಗ್ರಾಮಕ್ಕೆ ಹೊಂದಿಕೊಂಡು ಹೋಗುವ ಗದಗ-ಮುಂಡರಗಿ ಹೆದ್ದಾರಿಯಿಂದ ಗ್ರಾಮದ ಸಿದ್ದಲಿಂಗ ನಗರ ಮುಕ್ತಾಯಗೊಳ್ಳುವ ಪಶ್ಚಿಮ ದಿಕ್ಕಿನ ಹಳ್ಳದವರೆಗೆ 800 ಅಡಿ ಉದ್ದದಲ್ಲಿ 5 ಮೀಟರ್ ಅಗಲದ ಕಾಲುವೆ ನಿರ್ಮಿಸಿ ನಮಗಿರುವ ಆತಂಕವನ್ನು ದೂರಗೊಳಿಸಬೇಕು. ಗದಗ-ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಹಾಯ್ದು ಹೋಗುವ ಇದೇ ಕಾಲುವೆಯನ್ನು 5 ಮತ್ತು 10 ಮೀಟರ್ ಅಳತೆಯಲ್ಲಿ ಕಟ್ ಆ್ಯಂಡ್ ಕವರ್ ಪದ್ಧತಿಯನ್ನು ಅನುಸರಿಸಿದ್ದು, ನಮ್ಮ ಗ್ರಾಮದಲ್ಲೇಕೆ ಹೀಗೆ? ಇಲ್ಲಿಯೂ ಸಹ ಅದೇ ರೀತಿಯಲ್ಲಿ ಮಾಡಬೇಕೆಂದು ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ಜೀವಹಾನಿಯ ಮುಂಜಾಗ್ರತಾ ಕ್ರಮದಿಂದ ಮಾರ್ಗ ಬದಲಿಸುವುದು ಸೂಕ್ತ ಈ ಕುರಿತು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮಸ್ಥರ ಜತೆ ಚರ್ಚಿಸಿ ಮುಂದಿನ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಹೋರಾಟದ ಹಾದಿ ಹಿಡಿಯಬೇಕಾದೀತು ಎಂದು ಮನವಿಯಲ್ಲಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
-