ಹೈನುಗಾರಿಕೆಯಿಂದ ಆರ್ಥಿಕ ಸಬಲೀಕರಣ: ನೀಲಕಂಠಪ್ಪ
ಗಜೇಂದ್ರಗಡ: ಗ್ರಾಮೀಣ ಭಾಗದ ರೈತರು ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಹೈನುಗಾರಿಕೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಹೈನುಗಾರಿಕೆ ಹೊಂದಿ ಆರ್ಥಿಕವಾಗಿ ಸಬಲರಾಗಿ ಎಂದು ಧಾರವಾಡ ಹಾಲು ಒಕ್ಕೂಟದ ನೂತನ ಅಧ್ಯಕ್ಷ ನೀಲಕಂಠಪ್ಪ ಅಸೂಟಿ ಹೇಳಿದರು.
ಸಮೀಪದ ಗೋಗೇರಿ ಗ್ರಾಮ ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯಾಲಯದಲ್ಲಿ ಹಾಲು ಉತ್ಪಾದಕ ಸದಸ್ಯರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ರೈತರು ಒಕ್ಕುಲುತನ ಜೊತೆ ಹೈನುಗಾರಿಕೆಯಲ್ಲಿ ತೊಡಗುವುದರಿಂದ ಕುಟುಂಬ ನಿರ್ವಹಣೆ ಜತೆ ಆರ್ಥಿಕವಾಗಿಯೂ ಮುಂದೆ ಬರಲು ಸಾಧ್ಯ. ಈ ದಿಸೆಯಲ್ಲಿ ಗ್ರಾಮೀಣ ವಿದ್ಯಾವಂತ ಯುವಕರು ಹೈನೋದ್ಯಮ ಸ್ಥಾಪನೆಗೆ ಮುಂದಾಗಬೇಕು. ಇದರಿಂದ ಕೊಂಚ ನಿರುದ್ಯೋಗ ನಿವಾರಣೆ ಆಗಲಿದೆ ಎಂದರು. ಸಂಘದ ಉಪಾಧ್ಯಕ್ಷ ಈರಣ್ಣ ಸೊಬರದ ಮಾತನಾಡಿ, ಹಾಲು ಒಕ್ಕೂಟದಿಂದ ಉತ್ಪಾದಕರಿಗೆ ಸಿಗುವ ಸೌಲಭ್ಯಗಳನ್ನು ಒದಗಿಸಿಕೊಡಲು ಅಧ್ಯಕ್ಷರು ಹೆಚ್ಚು ಮುತುವರ್ಜಿ ವಹಿಸಬೇಕು. ಇದರಲ್ಲಿ ಸಂಘದ ಬೆಳವಣಿಗೆ ಅಡಗಿದೆ ಎಂದರು. ಡಾ. ಬಿ.ಎಸ್. ಪಾಟೀಲ, ಸಂಘ ಸ್ಥಾಪನೆ ಜತೆ ಚಟುವಟಿಕೆಗಳ ಕುರಿತು ವಿವರಣೆ ನೀಡಿದರು. ಹನುಮಂತಪ್ಪ ಹೊರಪೇಟೆ, ಐ.ಎಚ್. ಬಾಗವಾನ್, ಶಂಬಣ್ಣಾ ಗಾರಗಿ, ಹನುಮಂತಪ್ಪ ಕೊಡತಕೇರಿ, ಬಸಪ್ಪ ಯಗರಿ, ಚೆನ್ನಪ್ಪ ಮೂಲಿಮನಿ, ಬಸವರಾಜ ಸೋಂಪುರ, ಮಲ್ಲಪ್ಪ ಕೇರಿ ಉಪಸ್ಥಿತರಿದ್ದರು.