ಇ-ಟ್ರೇಡಿಂಗ್ ವಿರೋಧಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಗದಗ, ಜು, 5
ನಗರದಲ್ಲಿರುವ ಎಪಿಎಂಸಿಯಲ್ಲಿ ಇ-ಟ್ರೇಡಿಂಗ್ ಮೂಲಕ ಕೃಷಿ ಹುಟ್ಟುವಳಿ ಮಾರಾಟ ವ್ಯವಸ್ಥೆಯನ್ನು ಶನಿವಾರ ಜಾರಿಗೆ ತರಲಾಗಿದ್ದು, ಈ ಪ್ರಕ್ರಿಯೆಯನ್ನು ವಿರೋಧಿಸಿ ಶನಿವಾರ ಬೆಳಗ್ಗೆ ವರ್ತಕರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಕಚೇರಿಗೆ ಮುತ್ತಿಗೆ ಹಾಕಿ ಟೈರ್‌ಗೆ ಬೆಂಕಿ ಹಚ್ಚಿದರು.
ಇ-ಟ್ರೇಡಿಂಗ್ ವರ್ತಕರು, ದಲ್ಲಾಳಿಗಳಿಗೆ ತೀವ್ರ ತೊಂದರೆಯನ್ನುಂಟು ಮಾಡಿದೆ. ಜು. 8ರಿಂದ ಇ-ಟ್ರೇಡಿಂಗ್ ಜಾರಿಗೊಳಿಸುವ ಕುರಿತು ವರ್ತಕರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳುವ ಕುರಿತು ಚಿಂತನೆಯಲ್ಲಿದ್ದರೆ, ಜಿಲ್ಲೆಯಲ್ಲಿ ಶನಿವಾರದಿಂದಲೇ ಇ-ಟ್ರೇಡಿಂಗ್ ಜಾರಿಗೊಳಿಸಿರುವುದನ್ನು ವರ್ತಕರುಖಂಡಿಸಿದರು.
ರೈತರ ಹಾಗೂ ವರ್ತಕರ ವಿರೋಧಿ ಯೋಜನೆಗಳನ್ನು ಗದಗ ಜಿಲ್ಲೆಯಿಂದಲೇ ಪ್ರಾರಂಭಿಸಲಾಗುತ್ತಿದ್ದು, ಸರ್ಕಾರವು ಇ-ಟ್ರೇಡಿಂಗ್ ಜಾರಿ ಕುರಿತು ಇನ್ನೂ ಚಿಂತನೆಯಲ್ಲಿದ್ದರೆ ಗದಗ ಎಪಿಎಂಸಿಯಲ್ಲಿ ಜಾರಿಗೊಳಿಸಲಾಗಿದೆ.
ಯೋಜನೆಯಿಂದಾಗಿ ಜಿಲ್ಲೆಯ ವರ್ತಕರು, ಚಿಕ್ಕ ಚಿಕ್ಕ ದಲ್ಲಾಳಿಗಳ ಬಳಿ ಬರಬೇಕಿದ್ದ ರೈತರು ನೇರವಾಗಿ ಇ-ಟ್ರೇಡಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ವರ್ತಕರು ಸಾವಿರಾರು ರೈತರಿಗೆ ಮುಂಗಡವಾಗಿ ಹಣ ನೀಡಿದ್ದು, ಇದರಿಂದಾಗಿ ವರ್ತಕರಿಗೆ ತೀವ್ರ ತೊಂದರೆಯಾಗಲಿದೆ. ಈ ಯೋಜನೆಯಿಂದ ಕೇವಲ ಹೊರ ದೇಶದಲ್ಲಿರುವ ಬೃಹತ್ ಉದ್ದಿಮೆದಾರರಿಗೆ ಈ ಲಾಭ ದೊರೆಯಲಿದ್ದು, ಇದನ್ನು ಜಿಲ್ಲೆಯ ವರ್ತಕರೆಲ್ಲರೂ ವಿರೋಧಿಸುವುದಾಗಿ ತಿಳಿಸಿದರು.
ಬೆಳಗ್ಗೆ 10 ಗಂಟೆಗೆ ಇ-ಟ್ರೇಡಿಂಗ್ ಮೂಲಕ ಕೃಷಿ ಹುಟ್ಟುವಳಿ ಮಾರಾಟ ವ್ಯವಸ್ಥೆಯನ್ನು ಪ್ರಾರಂಭಿಸುತ್ತಿದಂತೆಯೇ ಆಕ್ರೋಶಗೊಂಡ ವರ್ತಕರು, ಕೃಷಿ ಉತ್ಪನ್ನ ಮಾರುಕಟ್ಟೆಯ ಆಡಳಿತ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಸ್ಥಳಕ್ಕೆ ಪೊಲೀಸರು ಆಗಮಿಸಿದ ವರ್ತಕರನ್ನು ತಡೆಯುವಲ್ಲಿ ಸಫಲರಾದರು. ಅಲ್ಲದೇ ವರ್ತಕರು ಮಾರುಕಟ್ಟೆಯ ಪ್ರಾಂಗಣವನ್ನು ಬಂದ್ ಮಾಡಿ 2 ಕಡೆಗಳಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗೆ ಪ್ರಾರಂಭವಾದ ಪ್ರತಿಭಟನೆಯು ಸಂಜೆಯವರೆಗೂ ಮಂದುವರಿಯಿತು.