ರಾಜ್ಯ ರೈಲು ಯೋಜನೆಗಳ ಕುರಿತು ಸಚಿವ ಸದಾನಂದಗೌಡರಿಗೆ ಮನವರಿಕೆ
ಕನ್ನಡಪ್ರಭ ವಾರ್ತೆ, ಗದಗ, ಜು. 5
ನವದೆಹಲಿಯ ಕರ್ನಾಟಕ ಭವನದಲ್ಲಿ ಶನಿವಾರ ರೇಲ್ವೆ ಸಚಿವ ಸದಾನಂದಗೌಡರಿಗೆ ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಕುತುಬುದ್ದಿನ್ ಖಾಜಿ, ಬಸವಣ್ಣೆಯ್ಯ ಹಿರೇಮಠ ನೇತೃತ್ವದಲ್ಲಿ ಭೇಟಿಯಾಗಿ ರೇಲ್ವೆ ಅಭಿವೃದ್ಧಿ ಕುರಿತು ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ನೂತನ ರೇಲ್ವೆ ಮಾರ್ಗಗಳಿಗೆ ಭೂಮಿ ನೀಡಿದ ರೈತ ಕುಟುಂಬದ ಒಬ್ಬರಿಗೆ ರೇಲ್ವೆ ಇಲಾಖೆಯಲ್ಲಿ ಡಿ ದರ್ಜೆಯ ಉದ್ಯೋಗ ಕಲ್ಪಿಸುವುದು, ಗದಗ-ಹಾವೇರಿ, ಗದಗ-ವಾಡಿ, ಮುನಿರಾಬಾದ-ಮೆಹಬೂಬ ನಗರ, ದಾವಣಗೆರೆ-ತುಮಕೂರು, ಹರಿಹರ-ಶಿವಮೊಗ್ಗ ನೂತನ ರೇಲ್ವೆ ಮಾರ್ಗಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಉಕ ಅಭಿವೃದ್ಧಿ ದೃಷ್ಟಿಯಿಂದ ಕುಡಚಿ-ಬಾಗಲಕೋಟೆ ಹೊಸ ರೇಲ್ವೆ ಮಾರ್ಗಗಳನ್ನು ರಾಯಚೂರವರೆಗೆ, ಹಾವೇರಿ-ಗದಗ ನೂತನ ರೇಲ್ವೆ ಮಾರ್ಗವನ್ನು ಗಜೇಂದ್ರಗಡ-ಕುಷ್ಟಗಿವರೆಗೆ ವಿಸ್ತರಿಸುವುದು.
ಗದಗ-ಮುಂಡರಗಿ-ಹರಿಹರ, ಆಲಮಟ್ಟಿ-ಯಾದಗಿರಿ, ಬಿಜಾಪುರ-ಶಹಬಾದ್, ಧಾರವಾಡ-ಬೆಳಗಾವಿ, ಬಾಗಲಕೋಟೆ-ಬೆಳಗಾವಿ, ಬಿಜಾಪುರ-ಶೇಡಬಾಳ, ಬದಾಮಿ-ಗಜೇಂದ್ರಗಡ ನೂತನ ರೇಲ್ವೆ ಮಾರ್ಗಗಳನ್ನು ಅನುಷ್ಠಾನ ತರಬೇಕು. ಹುಬ್ಬಳ್ಳಿ-ಮುಂಬಯಿ ಗದಗ ಬಾಗಲಕೋಟೆ ಮಾರ್ಗವಾಗಿ ಮಂಜೂರಾದ ರೈಲನ್ನು ಪ್ರತಿ ದಿನ ಓಡಿಸುವುದು. ಹುಬ್ಬಳ್ಳಿ- ನವದೆಹಲಿ ನೂತನ ರೈಲ್ನ್ನು ಗದಗ ಸೋಲಾಪುರ ಮಾರ್ಗವಾಗಿ, ಸೋಲಾಪುರ-ಮಂಗಳೂರು ರೈಲ್ನ್ನು ಗದಗ-ಹುಬ್ಬಳ್ಳಿ ಮಾರ್ಗವಾಗಿ, ಸೋಲಾಪುರ ತಿರುಪತಿ ರೈಲ್ನ್ನು ಗದಗ-ಕೊಪ್ಪಳ-ಗುಂತಕಲ ಮಾರ್ಗವಾಗಿ ಪ್ರತಿದಿನ ಸಂಚರಿಸುವಂತೆ ಓಡಿಸಬೇಕು.
ಗದಗ-ಹುಟಗಿ ಜೋಡಿ ಮಾರ್ಗ ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಪ್ರಾರಂಭಿಸುವುದು ಹಾಗೂ ಕರ್ನಾಟಕದಿಂದ ಅಂತಾರಾಜ್ಯಕ್ಕೆ ಚಲಿಸುವ ರೈಲೊಂದಕ್ಕೆ ವಿಶ್ವಸಂತ ಪದ್ಮವಿಭೂಷಣ ಡಾ. ಪಂಡಿತ ಪುಟ್ಟರಾಜ ಕವಿಗವಾಯಿಗಳ ಹೆಸರು ಇಡಲು ಮನವರಿಕೆ ಮಾಡಿಕೊಡಲಾಯಿತು.