ಹಳ್ಳಹಿಡಿದ ಶುದ್ಧ ನೀರು ಘಟಕಗಳು: ಅಸಮಾಧಾನ
ಕನ್ನಡಪ್ರಭ ವಾರ್ತೆ, ಶಿರಹಟ್ಟ, ಜು. 5
13ನೇ ಹಣಕಾಸು ಯೋಜನೆಯಡಿ ಅತಿ ಶೋಷಿತ ಹಾಗೂ ನೀರಿನ ಗುಣಮಟ್ಟದ ತೀವ್ರ ಸಮಸ್ಯೆಗೊಳಗಾಗಿರುವ ಗ್ರಾಮೀಣ ಜನವಸತಿಗಳಲ್ಲಿ 21 ಶುದ್ಧ ಕುಡಿಯುವ ನೀರು ಪೂರೈಕೆ ಘಟಕಗಳನ್ನು ಸ್ಥಾಪಿಸಿದ್ದು, ಸಮರ್ಪಕ ನಿರ್ವಹಣೆ ಇಲ್ಲದೇ ಕೋಟ್ಯಂತರ ಅನುದಾನ ಸರಿಯಾಗಿ ಬಳಕೆಯಾಗಿಲ್ಲ. ಅಧಿಕಾರಿಗಳ ಮತ್ತು ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಯೋಜನೆ ತಾಲೂಕಿನಲ್ಲಿ ಸಂಪೂರ್ಣ ಹಳ್ಳ ಹಿಡಿದಿದ್ದು, ಏನಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಜಿಪಂ ಅಭಿಯಂತರ ಕೆ. ಮಾಲತೇಶ ಅವರಿಗೆ ಶಾಸಕ ರಾಮಕೃಷ್ಣ ದೊಡ್ಡಮನಿ ತಾಕೀತು ಮಾಡಿದರು.
ಶನಿವಾರ ತಾಪಂ ಸಭಾಭವನದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿದ ಅವರು, 8ಕ್ಕೂ ಹೆಚ್ಚು ಸಮಸ್ಯಾತ್ಮಕ ಗ್ರಾಮಗಳಲ್ಲಿ 2 ಮತ್ತು 4 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಿದ್ದು, ಕಾರ್ಯನಿರ್ವಹಿಸುತ್ತಿಲ್ಲ. ಮಳೆ ಪ್ರಮಾಣ ತೀರಾ ಕಡಿಮೆಯಾಗಿದ್ದು, ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೆ ಪರದಾಡುವ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ತಾಲೂಕಿನ ಸುಗ್ನಳ್ಳಿ, ವರವಿ, ಯಳವತ್ತಿ, ರಣತೂರ, ಮಾಚೇನಹಳ್ಳಿ, ಹೊಳೆ-ಇಟಗಿ ಸೇರಿದಂತೆ ಇನ್ನೂ ಹತ್ತಾರು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ. ಸುಮಾರು 15 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಮಂಜೂರಿ ದೊರೆತಿದೆ. ಪಿಡಿಒಗಳು ಮತ್ತು ತಾಪಂ. ಇಒ ಒಂದು ವಾರದಲ್ಲಿ ಸಮೀಕ್ಷೆ ನಡೆಸಿ ನೀರಿನ ತೀವ್ರ ತೊಂದರೆ ಇರುವ ಗ್ರಾಮಗಳ ಬಗ್ಗೆ ಯಾದಿ ಸಿದ್ಧಪಡಿಸಬೇಕು. ಅಂತಹ 15 ಗ್ರಾಮಗಳಲ್ಲಿ ತುರ್ತಾಗಿ ಕಟ್ಟಡ ನಿರ್ಮಿಸಿ ಘಟಕ ಸ್ಥಾಪನೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಕಡಕೋಳದಲ್ಲಿ ಕೆರೆ ನಿರ್ಮಿಸದೇ ಲಕ್ಷಾಂತರ ಹಣದ ಬಿಲ್ ತೆಗೆದಿರುವ ಆರೋಪ ಕೇಳಿ ಬರುತ್ತಿದೆ. ಗ್ರಾಮಕ್ಕೆ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದು ಕ್ರಮ ಕೈಗೊಳ್ಳುವಂತೆ ತಾಪಂ ಇಒಗೆ ಸೂಚನೆ ನೀಡಿದರು. ತಾ.ಪಂ. ಅಧ್ಯಕ್ಷ ಕೋಟೆಪ್ಪ ವರ್ದಿ, ಜಿಪಂ ಉಪಾಧ್ಯಕ್ಷೆ ಸುನಿತಾ ಹಳ್ಳೆಪ್ಪನವರ, ಸದಸ್ಯ ಎಂ.ಎಸ್. ದೊಡ್ಡಗೌಡ್ರ, ಕಮಲವ್ವ ಸಜ್ಜನರ ಇದ್ದರು.