ಆಲಂಕಾರಿಕ ಭಾಷೆಯಿಂದ ಕೃತಿ ಸಾಹಿತ್ಯವಾಗದು: ಚುಸಾಪ ಅಧ್ಯಕ್ಷ ಬಡಿಗೇರ
ಗದಗ: ಕೇವಲ ಆಲಂಕಾರಿಕ ಭಾಷೆಯಿಂದ ಕೃತಿ ಸಾಹಿತ್ಯವಾಗುವುದಿಲ್ಲ. ಕಥೆ ಕಟ್ಟುವ ಕಲೆ ಇಲ್ಲದಿದ್ದರೆ ಕೃತಿ ಹೂರಣವಿಲ್ಲದ ಹೋಳಿಗೆಯಂತಾಗುತ್ತದೆ. ಯುವಕವಿಗಳು ಕಥೆ-ಕವನಗಳನ್ನು ರಚಿಸುವಾಗ ವಿಷಯ ವಸ್ತುವಿನತ್ತ ಗಮನ ನೀಡಬೇಕು ಎಂದು ಗದಗ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ವಿ. ಬಡಿಗೇರ ಹೇಳಿದರು. ಅವರು ಭಾನುವಾರ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಗದಗ ಜಿಲ್ಲಾ ಹವ್ಯಾಸಿ ಬರಹಗಾರರ ವೇದಿಕೆ ಆಶ್ರಯದಲ್ಲಿ ಶಿರಹಟ್ಟಿಯ ಭಾಗ್ಯಲಕ್ಷ್ಮೀ ಕುಬೇರ ವಿರಚಿತ ತ್ರಿವೇಣಿ ಕಥೆ-ನಾಟಕ ಕವನ ಸಂಕಲನ ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು. ಸಾಹಿತ್ಯ ಸೃಜನಶೀಲ, ಕಲಾತ್ಮಕ ಭಾವನೆಗಳ ಅಭಿವ್ಯಕ್ತಿಯ ಸಂದೇಶವಾಗಬೇಕೆ ಹೊರತು ಉಪದೇಶಗಳ ಕಂತೆಯಾಗಬಾರದು ಎಂದರು. ಅತಿಥಿಗಳಾಗಿ ಆಗಮಿಸಿದ್ದ ಮಂಜುನಾಥ ಅಬ್ಬಿಗೇರಿ ಮಾತನಾಡಿದರು. ಅತಿಥಿಗಳಾಗಿ ಪಾಲ್ಗೊಂಡ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಸ್. ಗೌಡರ ಮಾತನಾಡಿದರು. ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ, ಪ್ರಾ. ಕೆ.ಎಚ್. ಬೇಲೂರ, ವಿ.ಆರ್. ಮಾಳೆಕೊಪ್ಪಮಠ, ವಿಷ್ಣು ಬಡಿಗೇರ ಹಾಗೂ ಲೇಖಕಿ ಭಾಗ್ಯಲಕ್ಷ್ಮೀ ಕುಬೇರ ಮಾತನಾಡಿದರು. ಪ್ರಾ. ಎಸ್.ಸಿ. ಹೆದ್ದೂರಿ, ರಮಾಕಾಂತ ದೊಡ್ಡಮನಿ, ವಾಸುದೇವ ಕುಬೇರ, ಆರ್.ಎನ್. ಕುಲಕರ್ಣಿ, ಅಂದಾನಪ್ಪ ವಿಭೂತಿ, ಗಿರೀಶ ಟೊಣಪಿ, ವಿಶಾಲಾಕ್ಷಿ ದೇಶಪಾಂಡೆ, ಡಾ. ಬಿ.ಎಸ್. ರಾಠೋಡ, ಬಸವರಾಜ ಮಾಲಗಿತ್ತಿ, ಬಿ.ಎನ್. ತಾರಾ, ಎಫ್.ಪಿ. ಲಕ್ಷ್ಮೇಶ್ವರಮಠ, ವಿನುತಕುಮಾರ ಜಗತಾಪ, ಮೋಹನ ಸಾಳುಂಕೆ ಇದ್ದರು.