ವಿದ್ಯಾರ್ಥಿಗಳು ಕ್ರಿಯಾಶೀಲರಾಗಿರಬೇಕು: ಗೋಪಾಲಪ್ಪ ಕೆಂಚಿ
ಗಜೇಂದ್ರಗಡ: ಸತತ ಅಧ್ಯಯನ, ಕ್ರಿಯಾಶೀಲತೆ ವಿದ್ಯಾರ್ಥಿ ಬದುಕಿಗೆ ಪೂರಕ. ಈ ನಿಟ್ಟಿನಲ್ಲಿ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಗೌರವಾನ್ವಿತ ಪ್ರಜೆಯಾಗಿ ಬಾಳಿ ಎಂದು ಪದ್ಮಸಾಲಿ ಸಮಾಜ ಅಧ್ಯಕ್ಷ ಗೋಪಾಲಪ್ಪ ಕೆಂಚಿ ಹೇಳಿದರು. ಅವರು ಸ್ಥಳೀಯ ನೇಕಾರ ಕಾಲನಿಯ ಬನಶಂಕರಿ ದೇಗುಲ ಬಳಿ ಈಚೆಗೆ ಪದ್ಮಶಾಲಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
10 ವರ್ಷದಿಂದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕಾಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಹಿನ್ನೆ ಲೆಯಲ್ಲಿ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಿದ್ದು, ಸಮುದಾಯದ ಸಾಮಾಜಿಕ ಕಳಕಳಿಯನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳು ವಿದ್ಯಾವಂತರಾಗಿ ಎಂದರು. ಸಮಾಜದ ಹಿರಿಯ ಮುಖಂಡ ಈಶ್ವರಪ್ಪ ಕೆಂಚಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಶೈಕ್ಷಣಿಕ ಕ್ಷೇತ್ರ ಅತ್ಯಂತ ಸ್ಪರ್ಧಾ ಕ್ಷೇತ್ರವಾಗಿದ್ದು, ವಿದ್ಯಾರ್ಥಿಗಳು ಅದಕ್ಕೆ ತಕ್ಕಂತೆ ತಯಾರಿಯಾಗಿರಬೇಕು. ಜತೆಗೆ ಪಾಲಕರು ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿ ಸಹಕರಿಸಿದಾಗ ವಿದ್ಯಾರ್ಥಿ ಜೀವನದ ಗುರಿ ಸಾಧಿಸಲು ಸಾಧ್ಯ. ಈ ದೆಸೆಯಲ್ಲಿ ಅತ್ಯಂತ ಹಿಂದುಳಿದ ಸಮುದಾಯವಾದ ಪದ್ಮಶಾಲಿ ಬಂಧುಗಳು ಮಕ್ಕಳಿಗೆ ವಿದ್ಯೆ ನೀಡಿ ಮುಖ್ಯವಾಹಿನಿಗೆ ಬರಲು ಸಹಕರಿಸಿ ಎಂದರು. ಪಾಂಡುರಂಗ ಶಿಲವೇರಿ, ರಾಮಣ್ಣ ಅರವಾ ಮಾತನಾಡಿದರು. ಉಮಾದೇವಿ ಕೆಂಚಿ, ಮಾರ್ಕಂಡಪ್ಪ ಪಲಮಾರಿ, ಕಾಳಪ್ಪ ಶಿಲವೇರಿ, ಗುರುಮೂರ್ತಿ ಕೆಂಚಿ, ಶಶಿಧರ ಕೆಂಚಿ ಉಪಸ್ಥಿತರಿದ್ದರು.