ಅಭಿವೃದ್ಧಿಗೆ ಪೂರಕ: ಉದಾಸಿ
ಗದಗ: ರೈಲ್ವೆ ಬಜೆಟ್‌ನಲ್ಲಿ ಬುಲೆಟ್ ರೈಲು ಹಾಗೂ ದೇಶಾದ್ಯಂತ ಎಲ್ಲ ರೈಲು ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಿರುವುದು ಸ್ವಾಗತಾರ್ಹವಾಗಿದೆ ಎಂದು ಹಾವೇರಿ ಸಂಸದ ಶಿವಕುಮಾರ ಉದಾಸಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈಲುಗಳ ಪ್ರಯಾಣಿಕರಿಗೆ ಹೆಚ್ಚಿನ ಭದ್ರತೆ ನೀಡುವುದು ಸೇರಿದಂತೆ ರೇಲ್ವೆ ಅಭಿವೃದ್ಧಿಯ ಜತೆಗೆ ಪ್ರಯಾಣಿಕರಿಗೆ ಅನುಕೂಲಕರ ನಿಟ್ಟಿನಲ್ಲಿ ಕೇಂದ್ರದ ರೇಲ್ವೆ ಸಚಿವ ಡಿ.ವಿ. ಸದಾನಂದಗೌಡರು ಕ್ರಮ ಕೈಗೊಂಡಿದ್ದಾರೆ. ಹಾವೇರಿ ಲೋಕಸಭಾ ವ್ಯಾಪ್ತಿಯ ಬಹುದಿನದ ಬೇಡಿಕೆಯಾದ ಗದಗ-ಮುಂಡರಗಿ-ಹಡಗಲಿ ಮಾರ್ಗವಾಗಿ ಹರಪ್ಪನಹಳ್ಳಿ ನೂತನ ರೈಲು ಮಾರ್ಗದ ಸರ್ವೆಗೆ ಬಜೆಟ್‌ನಲ್ಲಿ ಘೋಷಣೆ ನೀಡಿರುವುದು ಸ್ವಾಗತಾರ್ಹವಾಗಿದೆ. ಗದಗದಿಂದ ಪಂಢರಾಪುರಕ್ಕೆ ನೂತನ ರೈಲು ಪ್ರಾರಂಭಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದ್ದಾರೆ.