ಕೈಹಿಡಿದ ಪುನರ್ವಸು: ಕೃಷಿಗೆ ಮತ್ತೆ ಜೀವ
ಲಕ್ಷ್ಮೇಶ್ವರ: ಬರಗಾಲಕ್ಕೆ ಸಿಲುಕಿದ್ದ ರೈತ ಸಮೂಹಕ್ಕೆ ಮುಂಗಾರಿನ ಪುನರ್ವಸು ಮಳೆಯು ತಾಲೂಕಿನ ತುಂಬ ಉತ್ತಮವಾಗಿ ಸುರಿದಿದ್ದರಿಂದ ಕೃಷಿ ಚಟುವಟಿಕೆಗೆ ಮತ್ತೆ ಜೀವ ಬಂದಂತಾಗಿದೆ.
ತಾಲೂಕಿನ ಲಕ್ಷ್ಮೇಶ್ವರ, ಗೊಜನೂರು, ಮಾಗಡಿ. ಪು, ಬಡ್ನಿ, ಶಿಗ್ಲಿ, ರಾಮಗೇರಿ, ಆದ್ರಳ್ಳಿ, ಹುಲ್ಲೂರು, ಬಟ್ಟೂರು, ಯಳವತ್ತಿ, ಕುಂದ್ರಳ್ಳಿ, ಕೋಗನೂರು, ಸೂರಣಗಿ, ದೊಡ್ಡರಲ್ಲಿ ಉತ್ತಮ ಮಳೆ ಸುರಿದಿದ್ದು ಕೃಷಿ ಚಟುವಟಿಕೆ ಚುರುಕುಗೊಂಡಿವೆ. ಈಗ ಉಳಿದ ಹೊಲಗಳಲ್ಲಿ ಬಿತ್ತನೆ ಕಾರ್ಯ ಮಾಡುವುದು, ಬಿಟಿ ಹತ್ತಿ ಬೆಳೆಯಲ್ಲಿ ಕಳೆ ತೆಗೆಯುವುದು, ಗೊಬ್ಬರ ಹಾಕುವುದು, ಮೆಣಸಿನ ಸಸಿಗಳ ನಾಟಿ ಮಾಡುವುದು, ಶೇಂಗಾ ಬೆಳೆಯ ಎಡೆ ಹೊಡೆಯುವುದು ಆರಂಭವಾಗಿದ್ದು ಕೃಷಿ ಕಾರ್ಮಿಕರಿಗೆ ಕೈತುಂಬ ಕೆಲಸಗಳು ದೊರೆತಿರುವುದು ಸಂತಸದ ಸಂಗತಿಯಾಗಿದೆ.
ಯಳವತ್ತಿಯಲ್ಲಿ ಸೋಮವಾರ ಸಂಜೆ 119 ಮಿಮೀ ದಾಖಲೆಯ ಮಳೆ ಸುರಿದಿದೆ. ಹಲವಾರು ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದ್ದು, ಮಳೆಯ ಹೊಡೆತಕ್ಕೆ ಬದುವುಗಳು ಕೊಚ್ಚಿಹೋಗಿ ರೈತರು ನಷ್ಟ ಅನುಭವಿಸಿದ್ದಾರೆ.