ಗದಗ-ಹರಪ್ಪನಹಳ್ಳಿ ರೈಲು ಮಾರ್ಗ: ಸಂತಸ
ಗದಗ: ಗದಗ-ಹರಪ್ಪನಹಳ್ಳಿ ರೈಲು ಮಾರ್ಗಕ್ಕೆ ರೇಲ್ವೆ ಸಚಿವ ಸದಾನಂದಗೌಡರು ಹಸಿರು ನಿಶಾನೆ ತೋರಿಸಿದ್ದು ಸಂತಸ ತಂದಿದೆ ಎಂದು ಹೋರಾಟಗಾರ, ಕಲಾವಿದ ಗವಿಸಿದ್ಧಯ್ಯ ಹಳ್ಳಿಕೇರಿಮಠ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಬ್ರಿಟಿಷರ ಕಾಲದಲ್ಲೇ ಮುಂಡರಗಿ, ಹೂವಿನಹಡಗಲಿ ಭಾಗದ ಕೂಗು ಇದಾಗಿದ್ದು, ತದನಂತರ ಸ್ವತಂತ್ರ ಪೂರ್ವ ಇತಿಹಾಸದಲ್ಲಿ ಅನೇಕ ರಾಜಕಿಯ ಮುತ್ಸದ್ದಿಗಳು, ಬುದ್ಧಿಜೀವಿಗಳು, ಕಲಾವಿದರು ಬೇಡಿಕೆಯನ್ನು ಸರ್ಕಾರದ ಮುಂದೆ ಸಲ್ಲಿಸುತ್ತಲೇ ಬಂದಿದ್ದಾರೆ ಎಂದಿದ್ದಾರೆ.
ಅದಲ್ಲದೇ ಅನೇಕ ವೇದಿಕೆಗಳು ಟೊಂಕಕಟ್ಟಿ ಹೋರಾಟಗಾರರಿಗೆ ಬೆಂಬಲ ನೀಡುವುದರ ಮುಖಾಂತರ ಶಕ್ತಿಯಾಗಿದ್ದು, ನಾನು ಬಾಲ್ಯದಿಂದಲೇ ಅನೇಕ ರೈಲ್ವೆ ಹೋರಾಟಗಳಲ್ಲಿ ನಿರತನಾಗಿದ್ದು, ಗದಗ-ಹರಪ್ಪನಹಳ್ಳಿ ಮಾರ್ಗ ಒಟ್ಟಾರೆ ರೈಲ್ವೆ ಹೋರಾಟಗಾರರ ಹೋರಾಟಕ್ಕೆ ಸಂದ ಜಯ. ಅನೇಕ ವರ್ಷಗಳಿಂದ ಜಿಲ್ಲೆಯಲ್ಲಿ ರೈಲ್ವೆ ಹೋರಾಟದಲ್ಲಿ ನಿರತರಾಗಿರುವ ರೈಲ್ವೆ ಹೋರಾಟಗಾರರಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.