ರೈಲ್ವೆ ಹೋರಾಟ ಸಮಿತಿ ವಿಜಯೋತ್ಸವ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜು .8
ಗದಗದಿಂದ ಮುಂಡರಗಿ, ಹೂವಿನಹಡಗಲಿ ಮತ್ತು ಹರಪ್ಪನಹಳ್ಳಿ ಮಾರ್ಗವಾಗಿ ಹರಿಹರಕ್ಕೆ ನೂತನ ರೈಲು ಮಾರ್ಗವನ್ನು ಕೇಂದ್ರ ರೈಲ್ವೆ ಬಜೆಟ್ನಲ್ಲಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಮುಂಡರಗಿ ತಾಲೂಕು ರೈಲ್ವೆ ಹೋರಾಟ ಸಮಿತಿ ಮತ್ತು ತಾಲೂಕು ಸಾರ್ವಜನಿಕ ಹೋರಾಟ ಸಮಿತಿಯ ಕಾರ್ಯಕರ್ತರು ಪಟ್ಟಣದ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ ಹಾಗೂ ಸಿಹಿ ಹಂಚಿ ವಿಜಯೋತ್ಸವವನ್ನು ಆಚರಿಸಿದರು.
ಗದಗದಿಂದ ಮುಂಡರಗಿ ಮಾರ್ಗವಾಗಿ ಹರಿಹರಕ್ಕೆ ನೂತನ ರೈಲು ಮಾರ್ಗವನ್ನು ಪ್ರಾರಂಭಿಸಬೇಕೆಂದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಇಲ್ಲಿಯ ರೈಲ್ವೆ ಹೋರಾಟ ಸಮಿತಿ ಮತ್ತು ಸಾರ್ವಜನಿಕ ಹೋರಾಟ ವೇದಿಕೆ ವಿವಿಧ ಹಂತದ ಹೋರಾಟಗಳನ್ನು ನಡೆಸಿ ಮನವಿಯನ್ನು ಅರ್ಪಿಸುತ್ತಾ ಬಂದಿದ್ದವು. ರಾಜ್ಯದಿಂದ ಮಲ್ಲಿಕಾರ್ಜುನ ಖರ್ಗೆ ಮತ್ತು ಮುನಿಯಪ್ಪ ಅವರು ರೈಲ್ವೆ ಮಂತ್ರಿಗಳಿದ್ದಾಗ ಈ ಭಾಗದ ಬೇಡಿಕೆ ಈಡೇರಿಸಬಹುದು ಎಂದು ಕನಸನ್ನು ಕಾಣಲಾಗಿತ್ತು. ಆದರೆ ಅವರು ಸ್ಪಂದಿಸಿರಲಿಲ್ಲ. ಕಾರ್ಯಕರ್ತರು ಹೋರಾಟವನ್ನು ನಿಲ್ಲಿಸದೆ ಮುಂದುವರಿಸಿಕೊಂಡು ಬಂದಿದ್ದರು. ಈಗ ರಾಜ್ಯದ ಈಗಿನ ಕೇಂದ್ರ ರೇಲ್ವೆ ಮಂತ್ರಿ ಡಿ.ವಿ. ಸದಾನಂದಗೌಡರು ಬಜೆಟ್ನಲ್ಲಿ ನೂತನ ರೇಲ್ವೆ ಮಾರ್ಗವನ್ನು ಘೋಷಣೆ ಮಾಡಿದ್ದು, ಕನಸು ನನಸಾಯಿತು ಎಂದು ರೇಲ್ವೆ ಹೋರಾಟಗಾರ ಬಸವರಾಜ ನವಲಗುಂದ ಹಾಗೂ ಬಸವರಾಜ ದೇಸಾಯಿ ಸಂತಸವನ್ನು ವ್ಯಕ್ತಪಡಿಸಿದರು.
ರೈಲ್ವೆ ಸಚಿವ ಡಿ.ವಿ. ಸದಾನಂದಗೌಡ, ಸಂಸದರಾದ ಶಿವಕುಮಾರ ಉದಾಸಿ ಹಾಗೂ ಬಿ.ಶ್ರೀರಾಮುಲ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಮಂಜುನಾಥ ಇಟಗಿ, ಪ್ರಭು ಅಬ್ಬಿಗೇರಿ, ಮಂಜುನಾಥ ಗೋಡಿ, ಪವನ್ ಚೋಪ್ರಾ, ರಾಜಾಬಕ್ಷಿ ಬೆಟಗೇರಿ, ಅಂದಾನಗೌಡ ಕುಲಕರ್ಣಿ, ಯಮನಪ್ಪ ಭಜಂತ್ರಿ, ಕುರುವತ್ತೆಪ್ಪ ಅರಿಷಣದ, ವೀರಭದ್ರಪ್ಪ ಕಬ್ಬಿಣದ, ರಾಮಚಂದ್ರ ಗಾರವಾಡ, ಸುರೇಶ ಮಾಳೆಕೊಪ್ಪ ಮುಂತಾದವರಿದ್ದರು.