ಸಿಐಟಿಯು ಜಾಥಾ ಇಂದು ಗದಗ ಜಿಲ್ಲೆಗೆ: ಎರಡು ದಿನ ಸಂಚಾರ
ಗದಗ: ಬಳ್ಳಾರಿಯಲ್ಲಿ ಸಿಐಟಿಯು ಅಖಿಲ ಭಾರತ ಜನರಲ್ ಕೌನ್ಸಿಲ್ ಸಭೆಯು ಜು. 11ರಿಂದ 14ರ ವರೆಗೆ ನಡೆಯಲಿದೆ. ಇದರ ಅಂಗವಾಗಿ ಸಿಐಟಿ ರಾಜ್ಯ ಸಮಿತಿ 5 ಜಾಥಾಗಳನ್ನು ಏರ್ಪಡಿಸಿದೆ. ಬೆಳಗಾವಿಯಿಂದ ಹೊರಡುವ ವಾಹನ ಜಾಥಾವು ಹಾವೇರಿ ಜಿಲ್ಲೆಯ ಮುಖಾಂತರ ಜು. 10ರಂದು ಸಂಜೆ 5 ಕ್ಕೆ ಜಿಲ್ಲೆಯ ಲಕ್ಷ್ಮೇಶ್ವರಕ್ಕೆ ಆಗಮಿಸಲಿದ್ದು, ನಂತರ ಜಿಲ್ಲೆಯಾದ್ಯಂತ ಸಂಚರಿಸಲಿದೆ. ಲಕ್ಷ್ಮೇಶ್ವರದ ಪಾಲಿಟೆಕ್ನಿಕ್ ಬಿಸಿಎನ್ ಕಾಲೇಜಿನ ಹತ್ತಿರ ಜಾಥಾ ಸ್ವಾಗತಿಸಲಾಗುವುದು. ನಂತರ ಮೆರವಣಿಗೆಯ ಮುಖಾಂತರ ಬಸ್ ನಿಲ್ದಾಣದ ವರೆಗೆ ತಲುಪಿದ ನಂತರ ಅಲ್ಲಿ ಜಾಥಾ ಸಭೆಯನ್ನು ನಡೆಸಲಾಗುವುದು. ಜು. 11ರಂದು ಬೆಳಗ್ಗೆ 10.30ಕ್ಕೆ ಗದಗನ ಮುಳಗುಂದ ನಾಕಾದ ಬಳಿ ಪ್ರವಾಸಿ ಮಂದಿರದ ಹತ್ತಿರ ಸ್ವಾಗತ ನಂತರ ಮೆರವಣಿಗೆಯ ಮುಖಾಂತರ ನಗರದ ಜೋಡು ಮಾರುತಿ ದೇವಸ್ಥಾನದ ಹತ್ತಿರ ಹಾಯ್ದು ಟಾಂಗಾಕೂಟ ಮುಖಾಂತರ ಗಾಂಧಿವೃತ್ತದ ವರೆಗೆ ತಲುಪಿ ಅಲ್ಲಿ ಜಾಥಾ ಸಭೆಯನ್ನು ನಡೆಸಲಾಗುವುದು. ಜು. 11ರಂದು ಮಧ್ಯಾಹ್ನ 3ಕ್ಕೆ ರೋಣ ಪಟ್ಟಣದ ಬಸ್‌ನಿಲ್ದಾಣದ ಹತ್ತಿರ ಸ್ವಾಗತ ನಂತರ ಮೆರವಣಿಗೆಯ ಮುಖಾಂತರ ಪಟ್ಟಣದ ಮುಲ್ಲಾನಬಾವಿ ವೃತ್ತದವರೆಗೆ ತಲುಪಿ ಅಲ್ಲಿ ಜಾಥಾ ಸಭೆಯನ್ನು ನಡೆಸಲಾಗುವುದು ನಂತರ ಜಾಥಾ ಬಾಗಲಕೋಟೆಗೆ ತೆರಳಲಿದೆ ಎಂದು ಸಿಐಟಿಯು ಜಿಲ್ಲಾ ಸಮಿತಿಯು ಅಧ್ಯಕ್ಷ ಮಹೇಶ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.