ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸುಡುಗಾಡು ಸಿದ್ಧರು ಕಣ್ಮರೆ

Mainashree
Updated On : 10 Jul 2014, 9:10 am

ಕನ್ನಡಪ್ರಭ ವಾರ್ತೆ, ಗದಗ, ಜು. 9
ತಮ್ಮ ವಾಕ್ ಚಾತುರ್ಯ ಹಾಗೂ ಜಾದೂ ಪ್ರದರ್ಶನದ ಮೂಲಕ ಜನರ ಮನಸ್ಸು, ಪುಟ್ಟಪುಟ್ಟ ಮಕ್ಕಳನ್ನು ಆಕರ್ಷಿಸುತ್ತಾ ಊರಿಂದ ಊರಿಗೆ ಸಂಚರಿಸುತ್ತಿದ್ದ ಸುಡುಗಾಡು ಸಿದ್ಧರು ಇಂದಿನ ಆಧುನಿಕ, ಕಂಪ್ಯೂಟರ್ ಯುಗದಲ್ಲಿ ಕಾಣಸಿಗುವುದು ವಿರಳ. ಇದಕ್ಕೆ ಪ್ರಮುಖ ಕಾರಣ ಸುಡುಗಾಡು ಸಿದ್ಧರ ಕುಟುಂಬದವರೂ ಇಂದು ಆಧುನಿಕತೆಗೆ ಮಾರುಹೋಗಿ ತಮ್ಮ ಕುಲಕಸಬನ್ನು ಕೈಬಿಟ್ಟಿದ್ದಾರೆ.
ಉದ್ದನೆಯ ನಿಲುವಂಗಿ, ನಿಲುವಂಗಿಯ ಮೇಲೊಂದು ಗಲೀಫ, ಕೊರಳ ತುಂಬೆಲ್ಲ ರುದ್ರಾಕ್ಷಿ ಮಾಲೆ, ಮುತ್ತಿನ ಸರಗಳ ಮಾಲೆ, ತಲೆಯ ಮೇಲೊಂದು ರುಮಾಲು, ಹಣೆಯ ತುಂಬೆಲ್ಲ ವಿಭೂತಿಯ ಪಟ್ಟ, ಕಿವಿಯಲ್ಲಿ ಲೋಲಾಕು, ಎಡಭಾಗದಲ್ಲಿನ ಹೆಗಲಿಗೆ ಒಂದು ಉದ್ದನೆಯ ಕೋಲು, ಈ ಕೋಲಿಗೆ ಜಾದೂಗೆ ಬೇಕಾದ ಸಾಮಗ್ರಿಗಳು ತುಂಬಿದ ಜೋಳಿಗೆ. ಸಾರ್ವಜನಿಕರು ನೀಡುವ ದವಸ, ಧಾನ್ಯಗಳನ್ನು ಸಂಗ್ರಹಿಸಿಕೊಟ್ಟುಕೊಳ್ಳಲು ಮತ್ತೊಂದು ಜೋಳಿಗೆಯೊಂದಿಗೆ ಅರೇ ರೇ ಸುಡುಗಾಡು ಸಿದ್ಧನಾಟ, ಸಿದ್ಧನಾಟ..... ಎಂದು ಗ್ರಾಮಕ್ಕೆ ಆಗಮಿಸಿದರೆ ಸಾಕು ಚಿಕ್ಕಮಕ್ಕಳೆಲ್ಲ ಇವರನ್ನು ಬೆನ್ನುಹತ್ತಿಕೊಂಡು ಹೋಗುತ್ತಿದ್ದರು.
ಸುಡುಗಾಡು ಸಿದ್ಧರಿಗೆ ಆಧಾರವೇ ಈ ಜೋಳಿಗೆ. ಲಿಂಗು, ಎಲುಬಿನ ತುಂಡು, ಬೆನಕಲ್ಲು, ಕವಡೆ, ಮುಳ್ಳು, ಗಜ್ಜುಗ, ಜಾದೂವಿನದಂಡು, ನಾಣ್ಯ, ಜಿಂಕೆಯ ಚರ್ಮದಿಂದ ಸುತ್ತಿರುವ ದಂಡು(ಬಡಿಗೆ), ಬಟ್ಟೆಯ ತುಂಡು ಮತ್ತು ಮಲ್ಲಾಡ ಗುಬ್ಬಿ ಹೀಗೆ ಹಲವು ವಸ್ತುಗಳನ್ನು ಸುಡುಗಾಡು ಸಿದ್ಧರು ತಮ್ಮ ಜೋಳಿಗೆಯಲ್ಲಿಟ್ಟುಕೊಂಡಿರುತ್ತಾರೆ.
ಮರೆಯಾಗುತ್ತಿರುವ ಸಿದ್ಧರು: ಸುಡುಗಾಡು ಸಿದ್ಧರ ವೃತ್ತಿಯು ವಂಶಪಾರಂಪರಿಕವಾಗಿ ಬಂದ ವೃತ್ತಿಯಾಗಿದೆ. ಆದರೆ ಇಂದು ಈ ವಂಶದವರು ತಮ್ಮ ಮೂಲವೃತ್ತಿಯನ್ನು ಕೈಬಿಟ್ಟು ಬೇರೆ ವೃತ್ತಿಯಲ್ಲಿ ತೊಡಗಿದ್ದು, ಇದರಿಂದಾಗಿ ಬಹು ಪ್ರಾಚೀನ, ವೈಶಿಷ್ಟತೆಯಿಂದ ಕೂಡಿರುವ ಈ ಸಿದ್ಧರ ಸಂಸ್ಕೃತಿ ಇಂದು ಕಣ್ಮರೆಯಾಗುತ್ತಿದೆ.
ನಮ್ಮ ಅಜ್ಜಾರ ಕಾಲದಿಂದಾನೂ ಈ ಸುಡುಗಾಡು ಸಿದ್ಧರಾಟಾನ ಆಡ್ಕೋಂತಾ ಬಂದೀವ್ರಿ. ನಾವ್ ಯಾವುದಾದ್ರ ಊರಿಗೆ ಹ್ವಾದ್ರ ಸಾಕ ಊರಾನ ಹುಡ್ರು, ದೊಡ್ಡಾರು ನಮ್ಮ ಹಿಂದ ಬಂದ್ ನಾವ್ ಮಾಡೋ ಜಾದೂನ ನೋಡಿ ಮೆಚ್ಚಕೊಳ್ತಿತಿದ್ರೀ... ಈ ಪದ್ಧತಿನಾ ನಮ್ಮ ಮಕ್ಳಿಗೆ ಹೇಳೀದ್ರ ನಾವ್ ಈ ಆಚರಣಿ ಮಾಡಾಕ ಒಲ್ಯಾ ಅಂತಾರ್ರಿ... ಹಿಂಗ್ ನಮ್ಮ ಮಂದಿ ಬಾಳ ಈ ವೃತ್ತಿ ಬಿಟ್ಟು ಬ್ಯಾರೆ ಬ್ಯಾರೆ ಕೆಲಸಾನ ಮಾಡಾಕುಂತಾರ್ರಿ.
            - ಬಸೆಟಪ್ಪ, ರಾಮಪ್ಪ, ಈಶಪ್ಪ ಸುಡುಗಾಡು ಸಿದ್ಧರು

 ಅಜೀಜಅಹ್ಮದ ಬಳಗಾನೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement