ಜನಸಂಖ್ಯಾಸ್ಫೋಟ ಪ್ರಗತಿಗೆ ಹಿನ್ನಡೆ
ರೋಣ: ಜನಸಂಖ್ಯೆ ಸ್ಫೋಟದಿಂದ ದೇಶದ ಆರ್ಥಿಕ ಪ್ರಗತಿ ಹಿನ್ನಡೆ ಜತೆಗೆ ಬಡತನ ಉಲ್ಬಣ, ನಿರುದ್ಯೋಗ ಸೃಷ್ಟಿ, ಆಹಾರ ಕೊರತೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಅನೇಕ ಸಮಸ್ಯೆಗಳ ಎದುರಿಸಬೇಕಾಗುತ್ತದೆ ಎಂದು ಎಜ್ಯುಕೇಶನ್ ಅಚೀವರ್ಸ್ ಸಂಸ್ಥೆ ಅಧ್ಯಕ್ಷ ಶಶಿಧರ ದಿಂಡೂರ ಹೇಳಿದರು. ಅವರು ಶುಕ್ರವಾರ ಪಟ್ಟಣದ ಎಲ್.ಐ. ದಿಂಡೂರ ಎಬಿಸಿ ಮಾಂಟೆಸ್ಸರಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ ಜನಸಂಖ್ಯೆ ನಿಯಂತ್ರಣ, ಜನಸಂಖ್ಯೆಯಿಂದಾಗುವ ದುಷ್ಪರಿಣಾಮಗಳ ಕುರಿತು ಶಾಲೆಯಿಂದ ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಮುಲ್ಲಾನಬಾವಿ ವೃತ್ತ, ಸೂಡಿ ವೃತ್ತದಲ್ಲಿ, ಶಿವಾನಂದ ಮಠದ ವರೆಗೆ ಜಾಗೃತಿ ಜಾಥಾ ನಡೆಸಲಾಯಿತು.
ಜಿಲ್ಲಾ ಎಂಜಿನಿಯರಿಂಗ್ ಸಂಸ್ಥೆಯ ಅಧ್ಯಕ್ಷ ಎಸ್.ಎಂ. ಅಂಗಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ರೋಟರಿ ಕ್ಲಬ್ ಅಧ್ಯಕ್ಷ ಮುರಗೇಶ ಬಡ್ನಿ, ವಿಜಯಕುಮಾರ ಕಮ್ಮಾರ, ಶಿಲ್ಪಾ ಜತ್ತಿ, ಶಾರದಾ ಹಿರೇಮಠ, ಶಾಂತಾ ಕಲ್ಲನಗೌಡ್ರ, ವಿದ್ಯಾಶ್ರೀ, ಕಮ್ಸೂಂ ಉಪಸ್ಥಿತರಿದ್ದರು.