ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜನಸಂಖ್ಯೆ ಹೆಚ್ಚಿದಂತೆ ಪರಿಸರ ನಾಶ

Mainashree
Updated On : 12 Jul 2014, 9:57 am

ಕನ್ನಡಪ್ರಭ ವಾರ್ತೆ, ಗದಗ, ಜು. 11
ಜನಸಂಖ್ಯೆ ಹೆಚ್ಚಿದಂತೆ ಸಸ್ಯ ಸಂಪತ್ತು ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳ ನಾಶವಾಗಿ ಪ್ರಕೃತಿ ಸಮತೋಲನ ತಪ್ಪುತ್ತದೆ ಎಂದು ಜಿಪಂ ಅಧ್ಯಕ್ಷೆ ಶಾಂತವ್ವ ದಂಡಿನ ಹೇಳಿದರು.
ಅವರು ಶುಕ್ರವಾರ ಆರೋಗ್ಯ ಇಲಾಖೆಯ ಆಶ್ರಯದಲ್ಲಿ ವಿವಿಧ ಇಲಾಖೆ ಹಾಗೂ ಸಂಸ್ಥೆಗಳ ಸಹಕಾರದಲ್ಲಿ ನಗರದ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪದವಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನಸಂಖ್ಯಾ ಹೆಚ್ಚಳದಿಂದ ದೇಶದಲ್ಲಿ ಆಹಾರ, ವಸತಿ, ಉದ್ಯೋಗ ಸಮಸ್ಯೆಗಳು, ಆರ್ಥಿಕ ಮುಗ್ಗಟ್ಟು ಉಂಟಾಗಿ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಕಾರಣ ಜನರಲ್ಲಿ ಜನಸಂಖ್ಯೆ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವುದು ಅತ್ಯವಶ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ ಮಾತನಾಡಿ, ವಿಶ್ವದ 363 ದೇಶಗಳಲ್ಲಿ 724 ಕೋಟಿ ಜನಸಂಖ್ಯೆಯಿದೆ. ಇದರಲ್ಲಿ ಭಾರತದ ಜನಸಂಖ್ಯೆ 125 ಕೋಟಿಗಿಂತಲೂ ಜಾಸ್ತಿಯಿದೆ. ಚೀನಾ ದೇಶದ ಜನಸಂಖ್ಯೆ 136 ಕೋಟಿಯಿದೆ.
ಜನಸಂಖ್ಯೆ ಇದೇ ರೀತಿ ಮಿತಿ ಮೀರಿ ಬೆಳೆಯುತ್ತ ಹೋದರೆ ಇಡೀ ವಿಶ್ವಕ್ಕೆ ಗಂಡಾಂತರ ಕಾದಿದೆ. ಸ್ತ್ರೀ ಭ್ರೂಣ ಹತ್ಯೆಯಿಂದ ಲಿಂಗದಲ್ಲಿ ಸಮತೋಲನ ಇಲ್ಲವಾಗಿದ್ದು, ಪ್ರಕೃತಿ ನಮ್ಮ ಜತೆ ಮುನಿಸಿಕೊಳ್ಳುತ್ತಿದೆ. ಅರಣ್ಯ ನಾಶದಿಂದ ಮಳೆ, ಬೆಳೆ ಇಲ್ಲದಂತಾಗಿ ನಿರುದ್ಯೋಗ ಸಮಸ್ಯೆ ಸಾರ್ವಜನಿಕ ಸ್ವಾಸ್ಥ್ಯ ಹದಗೆಡುತ್ತಿದೆ. ಸಮಾಜದಲ್ಲಿ ಎಲ್ಲ ವರ್ಗದ ಜನರಿಗೆ ಜನಸಂಖ್ಯೆ ಸ್ಫೋಟದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆ ಹೇಳಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದರು.
ಕೆ.ವಿ.ಎಸ್.ಆರ್. ಪಪೂ ಕಾಲೇಜಿನ ಪ್ರೊ. ಕವಿತಾ ಕಾಶಪ್ಪನವರ ಉಪನ್ಯಾಸ ನೀಡಿ, ಜನಸಂಖ್ಯೆ ಹೆಚ್ಚಳದಿಂದ ಶಿಕ್ಷಣ, ಆಹಾರ, ನೀರು ಉದ್ಯೋಗ ಸಮಸ್ಯೆಗಳು ಉಂಟಾಗುತ್ತವೆ. ಜನಸಂಖ್ಯೆ ನಿಯಂತ್ರಣಕ್ಕೆ ಸೂಕ್ತ ವಯಸ್ಸಿನಲ್ಲಿ ಮದುವೆ ಮಾಡುವುದು, ಗಂಡಿರಲಿ, ಹೆಣ್ಣಿರಲಿ ಒಂದೇ ಮಗು ಬೇಕು ಎಂಬ ಪಣ ತೊಡಬೇಕು ಎಂದರು. ಗೋಣಿ ಬಸವೇಶ್ವರ ಕಲಾ ತಂಡದ ವೀರಣ್ಣ ಹಾಗೂ ಸಂಗಡಿಗರಿಂದ, ಸೃಷ್ಟಿ ಜನಪದ ಕಲಾ ತಂಡದ ರಮೇಶ ಕಾಳೆ ಅವರಿಂದ ಗೀಗೀ ಪದ ಕಾರ್ಯಕ್ರಮ ಜರುಗಿತು.
ಡಾ. ಪಿ.ಎಚ್. ಕಬಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಉಪಾಧ್ಯಕ್ಷೆ ಸುನಿತಾ ಹಳ್ಳೆಪ್ಪನವರ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ನಿರ್ಮಲಾ ಬರದೂರು, ಬೀರಪ್ಪ ಬಂಡಿ, ತಾಪಂ ಪ್ರಭಾರಿ ಅಧ್ಯಕ್ಷ ಭೀಮಪ್ಪ ಲಮಾಣಿ, ಡಿ.ಎಚ್.ಒ ಡಾ. ಡಿ.ಬಿ. ಚೆನ್ನಶೆಟ್ಟಿ, ಪ್ರಾಚಾರ್ಯ ವಿ.ಎಚ್. ಚೆನ್ನಶೆಟ್ಟಿ, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎಸ್. ಗೌಡರ, ಡಾ. ಎಸ್.ಎಸ್. ನೀಲಗುಂದ, ಡಾ. ರೇಣುಕಾ ಕೊರವನವರ ಮುಂತಾದವರು ಉಪಸ್ಥಿತರಿದ್ದರು.  ಡಿ.ಜಿ. ಜೋಗಣ್ಣವರ ನಿರೂಪಿಸಿದರು. ಸುರೇಶ ಹೊಸಮನಿ ವಂದಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಬೆಳಗ್ಗೆ ನಗರದ ಮುನ್ಸಿಪಲ್ ಪಪೂ ಕಾಲೇಜು ಆವರಣದಿಂದ ಜನಜಾಗೃತಿ ಜಾಥಾ ಜರುಗಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement