ಮಾಗಡಿ ಕೆರೆ ಸಂರಕ್ಷಿತ ಪ್ರದೇಶ
ಕನ್ನಡಪ್ರಭ ವಾರ್ತೆ, ಗದಗ, ಜು. 11
ವಿದೇಶಿ ಹಕ್ಕಿಗಳ ಆಗಮನದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಯನ್ನು ಸಂರಕ್ಷಣಾ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಶುಕ್ರವಾರ ನಡೆದ ಜಿಪಂನ ಕೆಡಿಪಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಎರಡು ದಶಕಗಳಿಂದ ಕೆರೆಗೆ ನಿರ್ದಿಷ್ಟ ಅವಧಿಯಲ್ಲಿ ವಿದೇಶಿ ಹಕ್ಕಿಗಳು ಆಗಮಿಸುತ್ತಿದ್ದು, ಕೆರೆಗೆ ಯಾವುದೇ ರಕ್ಷಣೆ ಹಾಗೂ ಕಾವಲು ಇಲ್ಲದ ಕಾರಣ ಬೇಟೆಗಾರರ ಹಾವಳಿ, ಕೆರೆ ಒತ್ತುವರಿ ಸೇರಿದಂತೆ ಕೆರೆಯ ಪರಿಸರ ಹಾಳಾಗುತ್ತಿರುವುದನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಕೆಡಿಪಿ ಸಭೆ ಈ ನಿರ್ಣಯ ಕೈಗೊಂಡಿತು.
ಜನವರಿಯಿಂದ ಜೂನ್ ಅಂತ್ಯದ ವರೆಗೂ ಜಿಲ್ಲೆಯಲ್ಲಿ ಶೇ. 97ರಷ್ಟು ಮಳೆಯಾಗಿದ್ದರೂ ಸಹ ಸಕಾಲದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಬೆಳೆ ಬರುವಲ್ಲಿ ಕುಂಠಿತವಾಗಿದೆ. 4 ದಿನಗಳಿಂದ ಜಿಲ್ಲೆಯಾದ್ಯಂತ ಸುರಿದ ಮಳೆ ಆಶಾದಾಯಕವಾಗಿದ್ದು, ಜಿಲ್ಲೆಯಲ್ಲಿ ಬಿತ್ತನೆ ಬೀಜಗಳ ಕೊರತೆ ಇರುವುದಿಲ್ಲ. ಸೂಕ್ಷ್ಮ ಅಣುಜೀವಿ ಗೊಬ್ಬರ ಹಾಗೂ ಸಾವಯವ ಗೊಬ್ಬರದ ದಾಸ್ತಾನು ಖಾಸಗಿ ಹಾಗೂ ಸಹಕಾರಿ ಸಂಸ್ಥೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಿದ್ದು, ಜಿಲ್ಲೆಗೆ ಪ್ರಸಕ್ತ ಸಾಲಿಗಾಗಿ ಒಟ್ಟು 35 ಸಾವಿರ ಟನ್ ರಸಗೊಬ್ಬರದ ಅವಶ್ಯಕತೆಯಿದ್ದು, ಸದ್ಯ 13,494 ಟನ್ ಸಂಗ್ರಹವಿದೆ. ಆಗಸ್ಟ್ ವೇಳೆಗೆ ಬೇಕಾದ ರಸಗೊಬ್ಬರ ಪೂರೈಕೆಗೆ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಹೋಬಳಿ ಹಾಗೂ ಗ್ರಾಮಗಳಲ್ಲಿ ರೈತರಿಗೆ ಕೃಷಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಜರುಗಿಸಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿ ಬಾಲರೆಡ್ಡಿ ಸಭೆಯಲ್ಲಿ ಪ್ರಸ್ತಾಪಿಸಿದರು.
ಹಣಕಾಸಿನ ಕೊರತೆ
ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳ ಪುನರ್ ನಿರ್ಮಾಣಕ್ಕೆ ಹಣಕಾಸಿನ ಕೊರತೆ ಹಾಗೂ ತಾಂತ್ರಿಕ ಸಮಸ್ಯೆಯ ಕಾರಣ ಹಿನ್ನಡೆಯಾಗುತ್ತಿರುವುದನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಪ್ರಸಾದ ಪ್ರಸ್ತಾಪಿಸಿದರು. ಜಿಲ್ಲೆಯ ಡೋಣಿ ಹಾಗೂ ಮಹಾಲಿಂಗಪುರ ತಾಂಡಾಗಳು ಸೇರಿದಂತೆ ವಿವಿಧೆಡೆ 50ಕ್ಕೂ ಹೆಚ್ಚು ಡೆಂಘೀ, ಸುಮಾರು 294 ಮಲೇರಿಯಾ ಪ್ರಕರಣಗಳು ಕಂಡುಬಂದಿದ್ದು, ಬಹುತೇಕ ಗೋವಾ ಮತ್ತು ಮಂಗಳೂರಿಗೆ ದುಡಿಯಲು ಹೋಗಿ ವಾಪಸ್ ಬಂದ ಜನರಲ್ಲಿ ಈ ಕಾಯಿಲೆ ಕಂಡುಬಂದಿದ್ದು, ವೈದ್ಯಾಧಿಕಾರಿಗಳಿಗೆ ಕೇಂದ್ರಸ್ಥಾನದಲ್ಲಿದ್ದುಕೊಂಡು ಸೂಕ್ತ ಚಿಕಿತ್ಸೆ ನೀಡಲು ಹಾಗೂ ಕುಡಿಯುವ ನೀರಿನ ಮೂಲಗಳಿಗೆ ಕ್ಲೋರಿನೇಶನ್ ಮಾಡಿಸಲು ಕ್ರಮ ಕೈಗೊಳ್ಳಲಾಗಿದ್ದು, ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಡಿಎಚ್‌ಒ ಡಾ. ಡಿ.ಬಿ. ಚೆನ್ನಶೆಟ್ಟಿಹೇಳಿದರು.
ಜಿಪಂನ ಉಪಕಾರ್ಯದರ್ಶಿ ಷಡಕ್ಷರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಪ್ರಾಧಾನ್ಯತೆ ನೀಡಲಾಗಿದ್ದು, ಸಾಕಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಮೂಲಕ ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದರು. ಜಿಪಂ ಅಧ್ಯಕ್ಷೆ ಶಾಂತವ್ವ ದಂಡಿನ, ಉಪಾಧ್ಯಕ್ಷೆ ಸುನಿತಾ ಹಳ್ಳೆಪ್ಪನವರ ಉಪಸ್ಥಿತರಿದ್ದರು. ಜಿಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ, ನಿರ್ಮಲಾ ಬರದೂರ, ಬೀರಪ್ಪ ಬಂಡಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.