ಬಿ.ಜಿ. ಅಣ್ಣಿಗೇರಿ ಮಾದರಿ ಗುರು: ಅಬ್ಬಿಗೇರಿ
ಗದಗ: ನಿಸ್ವಾರ್ಥ ಮನೋಭಾವದಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ವಸತಿ ದಾಸೋಹವನ್ನು ನಡೆಸುತ್ತಿರುವ ಗದುಗಿನ ಬಿ.ಜಿ. ಅಣ್ಣಿಗೇರಿ ಗುರು ಗುರುಗಳಿಗೆಲ್ಲ ಮಾದರಿಯಾದ ಗುರು ಎಂದು ಮಂಜುನಾಥ ಅಬ್ಬಿಗೇರಿ ಹೇಳಿದರು.
ಅವರು ಶನಿವಾರ ಸಂಜೆ ನಗರದ ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಗುರುಪೂರ್ಣಿಮೆ ನಿಮಿತ್ತ ಬಿ.ಜಿ. ಅಣ್ಣಿಗೇರಿ ಗುರುಗಳಿಗೆ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಭಾರತೀಯ ಪರಂಪರೆಯಲ್ಲಿ ಗುರುವಿಗೆ ಅತ್ಯಂತ ಪೂಜನೀಯ ಸ್ಥಾನವಿದೆ. ಹಿಂದೆ ಗುರುಕುಲಾಶ್ರಮದಲ್ಲಿ ಇದ್ದ ಋಷಿಮುನಿಗಳ ಸಾಲಿಗೆ ಗದುಗಿನ ಅಣ್ಣಿಗೇರಿ ಗುರುಗಳು ಸೇರುತ್ತಾರೆ ಎಂದರು.
ಬಿ.ಜಿ. ಅಣ್ಣಿಗೇರಿ ಗುರುಗಳಿಗೆ ಆಶ್ರಮದ ಶಿಷ್ಯರು, ಆಶ್ರಮದ ಮಕ್ಕಳಿಗೆ ಹುಬ್ಬಳ್ಳಿಯ ಬಿಎಸ್ಎನ್ಎಲ್ ಅಧಿಕಾರಿ ವಿ.ಎಸ್. ಮ್ಯಾಗೇರಿ ದಂಪತಿಗಳ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಶಿವಾನಂದ ದಂಡಿನ ಅಧ್ಯಕ್ಷತೆ ವಹಿಸಿದ್ದರು. ಎಸ್.ಜಿ. ಅಣ್ಣಿಗೇರಿ, ಸಂಗೀತ ಶಿಕ್ಷಕ ಎಸ್.ಎಸ್.ದೊಡ್ಡಮನಿ, ಶಿಕ್ಷಕ ನಲವಡಿ, ವಿ.ಎಸ್. ಮುಗಳಿ, ಬಸವಂತಪ್ಪ, ಪ್ರವೀಣ ಮಡಿವಾಳರ, ಮಂಜುನಾಥ ಹರ್ಲಾಪುರ ಹಾಗೂ ಆಶ್ರಮದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.