ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಳೆಗಾಗಿ ಗೊಂಬೆಗಳ ಮದುವೆ

Mainashree
Updated On : 15 Jul 2014, 9:45 am

 ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಜು. 14
ಮಲೆನಾಡು ಭಾಗದಲ್ಲಿ ಮಳೆ ವ್ಯಾಪಕವಾಗಿ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಆದರೆ, ವಿಪರ್ಯಾಸವೆಂದರೆ ಜಿಲ್ಲೆಯಲ್ಲಿ ಮಳೆಯಾಗಲಿ ಎಂದು ಸಾರ್ವಜನಿಕರು ಸೋಮವಾರ ಗೊಂಬೆಗಳ ಮದುವೆ ಮಾಡುವ ಮೂಲಕ ವರುಣ ದೇವರಲ್ಲಿ ಪ್ರಾರ್ಥಿಸಿದ್ದು ವಿಶೇಷವಾಗಿತ್ತು.
ಆ ಮನೆಯಲ್ಲಿ ಮದುವೆಯ ಸಡಗರವಿತ್ತು, ಮದುವೆಯ ಸಂದರ್ಭದಲ್ಲಿ ಮಾಡಬೇಕಾದ ಎಲ್ಲ ಕೈಂಕರ್ಯಗಳು ನಡೆಯುತ್ತಿದ್ದವು, ಓಣಿಯಲ್ಲಿನ ಎಲ್ಲರೂ ಸಂಭ್ರಮದಿಂದ ಮದುವೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಅಲ್ಲಿ ಮದುಮಕ್ಕಳು ಮಾತ್ರ ಇರಲಿಲ್ಲ, ಹಾಗಾದ್ರೆ ಇದೇನಿದು ವಿಶೇಷ ಮದುವೆ ಅಂತೀರಾ... ಹೌದು, ಇದು ಗೊಂಬೆಗಳ ಮದುವೆ, ಉತ್ತಮ ಮಳೆ ಬರಲಿ ಎಂದು ಸೋಮವಾರ ಗದುಗಿನ ಕುಂಬಾರ ಓಣಿಯ ಜನತೆ ನಡೆಸಿದ ವಿಶೇಷ ಮದುವೆ ಇದು.
ನಿಯಮ ಪಾಲನೆ
ಓಣಿಯ ಹಿರಿಯರೆಲ್ಲಾ ಸೇರಿಕೊಂಡು ಗೊಂಬೆಗಳಿಗೆ ಅರಿಷಿಣ ಹಾಗೂ ಅರಿಷಿಣ ನೀರು ಹಾಕಿದ್ದಾರೆ. ಆದರೆ ಗೊಂಬೆಗಳು ಸರಿಯಾಗಿ ಕುಳಿತುಕೊಳ್ಳುವುದಿಲ್ಲ ಎನ್ನುವ ಕಾರಣಕ್ಕಾಗಿ ಚಿಕ್ಕ ಮಕ್ಕಳ ಕೈಯಲ್ಲಿ ಈ ಗೊಂಬೆಗಳನ್ನು ಕೊಟ್ಟು ಅವರ ಮೂಲಕವೇ ಗೊಂಬೆಗಳ ಮದುವೆ ಮಾಡಿದ್ದಾರೆ. ಹೆಣ್ಣು ಮತ್ತು ಗಂಡು ಗೊಂಬೆಗಳಿಗೆ ಸುರಗಿ ಕಟ್ಟುವುದು, ವಿಶೇಷ ಆರತಿ ಮಾಡುವುದು ಹೀಗೆ ಉತ್ತರ ಕರ್ನಾಟಕ ಶೈಲಿಯಲ್ಲಿ ನಡೆಯುವ ಸಾಮಾನ್ಯ ಮದುವೆಗಳಂತೆಯೇ ಗೊಂಬೆಗಳಿಗೆ ಮದುವೆಗೂ ಎಲ್ಲ ನಿಯಮಗಳನ್ನು ಪಾಲನೆ ಮಾಡಿದ್ದು ಗಮನಾರ್ಹವಾಗಿತ್ತು.
ಈ ರೀತಿ ಗೊಂಬೆಗಳ ಮದುವೆ ಮಾಡುವುದರಿಂದ ಮಳೆಯಾಗುತ್ತದೆಯೇ ಎನ್ನುವ ಪ್ರಶ್ನೆ ಸಹಜವಾಗಿ  ಮೂಡುತ್ತದೆ. ಆದರೆ, ಇದಕ್ಕೆ ಸೋಮವಾರ ಮದುವೆ ಕಾರ್ಯ ನಡೆಸಿದ ಹಿರಿಯರು ಹೇಳುವುದು, ಈ ರೀತಿ ಮಳೆ ಕೊರತೆ ಎದುರಾದ ಸಂದರ್ಭದಲ್ಲಿ ನಮ್ಮ ಹಿರಿಯರು ಗೊಂಬೆಗಳ ಮದುವೆ ಮಾಡುತ್ತಿದ್ದರು.
 ಇದು ದೇವರಿಗೆ ಮನವರಿಕೆಯಾಗಿ, ರೈತರ ನೆರವಿಗೆ ಧಾವಿಸುತ್ತಿದ್ದ, ಆವಾಗ್ಗೆ ಮಳೆಯಾಗುತ್ತಿತ್ತು. ಅದಕ್ಕಾಗಿ ನಾವೂ ಅದನ್ನು ಪಾಲಿಸಿಕೊಂಡು ಹೋಗುತ್ತಿದ್ದೇವೆ. ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ನಾವು ಸಾಗುತ್ತಿದ್ದೇವೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಮಳೆ ಕೊರತೆಯಿಂದ ಗದಗ ಜಿಲ್ಲೆಯ ಜನತೆ ಬೇಸತ್ತು ಹೋಗಿದ್ದು, ಹತ್ತಾರು ರೀತಿಯ ಪೂಜೆ, ಆಚರಣೆಗಳನ್ನು ಪೂರ್ಣಗೊಳಿಸಿದ್ದಾರೆ.
ಒಗ್ಗಟ್ಟು ಮೂಡುವುದು
ಸಂಪೂರ್ಣ ಕೃಷಿಯನ್ನೇ ನಂಬಿರುವ ಕುಟುಂಬಗಳಿಗೆ ಮಳೆ ಇಲ್ಲದೇ ಕಾಯಕವೇ ಇಲ್ಲ, ಇಂತಹ ಸಂದರ್ಭದಲ್ಲಿ ಓಣಿಗಳಲ್ಲಿರುವ ಎಲ್ಲರೂ ಸೇರಿ, ಈ ರೀತಿಯ ಧಾರ್ಮಿಕ ಕಾರ್ಯಗಳಲ್ಲಿ ತೊಡಗುವುದರಿಂದ ಸಮಾಜದಲ್ಲಿ ಒಗ್ಗಟ್ಟು ಮೂಡುತ್ತದೆ. ಮನಸ್ಸಿಗೂ ಕೊಂಚ ನೆಮ್ಮದಿ ಸಿಗುತ್ತದೆ ಎನ್ನುವುದು ಇದರ ಹಿಂದಿರುವ ವೈಜ್ಞಾನಿಕ ಹಿನ್ನೆಲೆ ಎನ್ನುವುದನ್ನು ಮದುವೆಯಲ್ಲಿದ್ದ ಮತ್ತೊಬ್ಬ ಹಿರಿಯರುಹೇಳುತ್ತಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement