ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಧಿಕಾರದಲ್ಲಿ ಇರುವವರು ಸತ್ಯದ ಕಡೆ ಮುಖ ಮಾಡಬೇಕು

Lingaraj Badiger
Updated On : 17 Jul 2014, 10:49 am

ಮುಂಡರಗಿ: ಇಂದು ಅನೇಕ ಜನ ಉಳ್ಳವರು, ಅಧಿಕಾರದಲ್ಲಿರುವವರು ಹಣದ ಕಡೆ ಮುಖ ಮಾಡುತ್ತಿರುವುದು ವಿಷಾದನೀಯ. ಅವರೆಲ್ಲಾ ಹಣವನ್ನು ಕೇವಲ ಅವಶ್ಯಕತೆಗಷ್ಟೇ ಬಳಕೆ ಮಾಡಿಕೊಂಡು ಸತ್ಯದ ಕಡೆಗೆ ಮುಖ ಮಾಡಬೇಕು. ಅಂದಾಗ ಮಾತ್ರ ಬಡವರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ದೆಹಲಿಯ ತೋಂಟದಾರ್ಯ ಶಾಖಾ ಮಠದ ಮಹಾಂತ ದೇವರು ಹೇಳಿದರು. ಅವರು ಮಂಗಳವಾರ ಸಂಜೆ ಮುಂಡರಗಿ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ನಡೆಯುತ್ತಿರುವ ಶರಣರ ತತ್ವದರ್ಶನ ಪ್ರವಚನದಲ್ಲಿ ಮಾತನಾಡುತ್ತಿದ್ದರು. ಯೋಗಿಗಳಿಗೆ ಕಾಯಕವೇ ಕೈಲಾಸವಾಗಿತ್ತು. ಆತ್ಮದ ರಕ್ಷಣೆಗೆ ಶರಣರ ತತ್ವಗಳ ಕಡೆಗೆ ನಮ್ಮ ಮನಸ್ಸು ಹೋಗಬೇಕು. ನಮ್ಮ ಆತ್ಮದ ಶಕ್ತಿಯೇ ಜಂಗಮರು. ನಾವೆಲ್ಲರೂ ಶರಣರ ತತ್ವದ ಕಡೆಗೆ ಹೆಚ್ಚಿನ ಗಮನ ಹರಿಸಿದಾಗ ನಮ್ಮಲ್ಲಿ ಮೋಹದ ಮನಸ್ಸು ಇರುವುದಿಲ್ಲ. ನಿಯಮಗಳು ಸಂತರಿಗೆ, ಸಂಸಾರಸ್ಥರಿಗೆ ಸಂಬಂಧಿಸುತ್ತದೆ.  ಮನರಂಜನೆ ಎಂದರೆ ಎಲ್ಲರೂ ಅತ್ತ ಕಡೆಗೆ ಗಮನ ಹರಿಸುತ್ತಾರೆ. ಆದರೆ ಶರಣರ ತತ್ವಗಳ ಬಗ್ಗೆ ತಿಳಿಯಲು ಇಂದು ಯಾರೂ ಕೂಡ ಮುಂದು ಬರುತ್ತಿಲ್ಲ. 20ನೇ ಶತಮಾನದಲ್ಲಿ ಧಾರವಾಡದ ಮೃತ್ಯುಂಜಯ ಶರಣರು ಶಿವನೇ ಬಸವ, ಬಸವ ಶಿವನೆ ಎಂದು ಧ್ಯಾನ ಮಾಡಿ ಪ್ರಸಿದ್ಧಿಯಾದರು. ಇಂತಹ ಬಸವಾದಿ ಶಿವಶರಣರ ತತ್ವಗಳನ್ನು ಕೇಳಿ ನಾವೆಲ್ಲರೂ ನಮ್ಮ ಜೀವನವನ್ನು ಸಾರ್ಥಕಗೊಳಿಸೋಣ ಎಂದರು.
ಜಿಲ್ಲಾ ಯೋಜನಾ ಸಮಿತಿಗೆ ಆಯ್ಕೆ
ಗದಗ:  ಜಿಲ್ಲಾ ಯೋಜನಾ ಸಮಿತಿಗೆ ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಕ್ಷೇತ್ರದ 8 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕೆಳಕಂಡ ಪ್ರತಿನಿಧಿಗಳು ಆಯ್ಕೆಗೊಂಡಿದ್ದಾರೆ. ಗದುಗಿನ ಶಿವಲೀಲಾ ಅಕ್ಕಿ, ನರಗುಂದ- ಕಿರಣ ಮುಧೋಳೆ, ಲಕ್ಷ್ಮೇಶ್ವರ- ಗುರುಪುತ್ರಪ್ಪ ಮಡ್ಲೇರಿ, ನರಗುಂದ- ಮಹೇಶ ಬಡಿಗೇರ, ರೋಣ- ಮಂಜುನಾಥ ಹಾಳಕೇರಿ, ಗದಗ-ಬೆಟಗೇರಿಯ ರಾಘವೇಂದ್ರ ಯಳವತ್ತಿ, ಮುಂಡರಗಿಯ ಲಿಂಗರಾಜಗೌಡ ಪಾಟೀಲ ಹಾಗೂ ನರೇಗಲ್ಲದ ಶಶಿಧರ ಸಂಕನಗೌಡ್ರ ಆಯ್ಕೆಯಾಗಿದ್ದಾರೆ. ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಬುಧವಾರ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯ ವರೆಗೆ ಜಿಲ್ಲೆಯ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಒಟ್ಟು 203 ಚುನಾಯಿತ ಪ್ರತಿನಿಧಿಗಳ ಪೈಕಿ 186 ಜನ ಮತ ಚಲಾಯಿಸಿದರು. ನಂತರ ನಡೆದ ಮತ ಎಣಿಕೆಯಲ್ಲಿ ಜಿಲ್ಲಾ ಯೋಜನಾ ಸಮಿತಿಗೆ ಪ್ರತಿನಿಧಿಗಳಾಗಿ ಆಯ್ಕೆಗೊಂಡವರ ಹೆಸರುಗಳನ್ನು ಚುನಾವಣಾಧಿಕಾರಿ, ಪ್ರಭಾರಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಎಸ್. ಷಡಕ್ಷರಪ್ಪ ಘೋಷಿಸಿದರು.
ಜಯರಾಮ್ ಶೇಳಕೆ ನಿಧನ
ಶಿರಹಟ್ಟಿ:  ಪಟ್ಟಣದ ನವನಗರದ ನಿವಾಸಿ ಜಯರಾಮ್ ಪುಂಡಲೀಕ ಶೇಳಕೆ (52) ಬುಧವಾರ ನಿಧನ ಹೊಂದಿದರು. ಮೃತರು ಪತ್ನಿ, ಎರಡು ಗಂಡು, ಓರ್ವ ಹೆಣ್ಣು ಹಾಗೂ ಸಹೋದರರನ್ನು ಅಗಲಿದ್ದಾರೆ. ಶಾಸಕ ರಾಮಕೃಷ್ಣ ದೊಡ್ಡಮನಿ, ಪಪಂ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಡಿ.ಎನ್. ಡಬಾಲಿ, ವೈ.ಎಸ್. ಪಾಟೀಲ, ಎನ್.ಆರ್. ಕುಲಕರ್ಣಿ, ರಾಮಣ್ಣ ಡಂಬಳ, ಪಿ.ವಿ. ಪರಬ, ಬೀರಪ್ಪ ಸ್ವಾಮಿ, ಅಶೋಕ ಕಲಬುರ್ಗಿ, ಕೆ.ಎನ್. ಸ್ವಾಮಿ, ದೇವೇಂದ್ರಪ್ಪ ಪವಾರ, ಎಸ್.ಆರ್. ಸರ್ಜಾಪೂರ, ಎಫ್.ಎಂ. ಡಬಾಲಿ ಸಂಸ್ಥೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement