ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಧರ್ಮದಿಂದ ಸದ್ಗತಿ ಪಡೆಯಿರಿ: ಸ್ವಾಮೀಜಿ

Lingaraj Badiger
Updated On : 17 Jul 2014, 10:53 am

ಗದಗ:  ವಿದ್ಯೆ ನೀಡಿದ ಗುರುವನ್ನು, ಸನ್ಮಾರ್ಗವನ್ನು ತೋರುವ ಧರ್ಮಗುರುಗಳನ್ನು ಗೌರವಿಸಿ ಆರಾಧಿಸುವ ಕಾರ್ಯ ಎಲ್ಲರಿಂದ ಆಗಬೇಕು. ಎಲ್ಲರೂ ಧರ್ಮದಿಂದ ನಡೆದು ಸದ್ಗತಿಯನ್ನು ಪಡೆಯಬೇಕು ಎಂದು ಸೂಡಿ-ಗದಗ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಹೇಳಿದರು.  ಅವರು ತಾಲೂಕಿನ ಚಿಕ್ಕಹಂದಿಗೋಳ ಗ್ರಾಮದ ಹಿರೇಮಠ ಆವರಣದಲ್ಲಿ ಈಚೆಗೆ ಜರುಗಿದ ಗುರುಪೂರ್ಣಿಮೆ ಅಂಗವಾಗಿ ಮಹಾ ಶಿವಶರಣೆ ಗುಡ್ಡಾಪುರ ದಾನಮ್ಮದೇವಿಯ ಪುರಾಣ ಪ್ರವಚನದ ಮಹಾಮಂಗಲೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಚಿಕ್ಕಹಂದಿಗೋಳ ಒಪ್ಪತ್ತೇಶ್ವರಮಠದ ಅಭಿನವ ಒಪ್ಪತ್ತೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. ಮಹಾಶಿವಶರಣೆ ಗುಡ್ಡಾಪುರ ದಾನಮ್ಮದೇವಿಯ ಪುರಾಣ ಪ್ರವಚನ ಮಹಾಮಂಗಲದ ಹಿನ್ನಲೆಯಲ್ಲಿ ಕತೃ ಗದ್ದುಗೆಗೆ ರುದ್ರಾಭಿಷೇಕ, ನಂತರ ದಾನಮ್ಮದೇವಿಯ ಭಾವಚಿತ್ರ ಮೆರವಣಿಗೆ ಜರುಗಿತು.  ಪಿ.ಸಿ. ಹಿರೇಮಠ ಸ್ವಾಗತಿಸಿದರು. ಈರಣ್ಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


ಛಾಯಾಗ್ರಾಹಕನ ಮೇಲೆ ಹಲ್ಲೆ: ಪತ್ರಕರ್ತರ ಸಂಘ ಖಂಡನೆ
ಗಜೇಂದ್ರಗಡ: ದಾವಣಗೆರೆಯಲ್ಲಿ ಖಾಸಗಿ ಸುದ್ದಿವಾಹಿನಿಛಾಯಾಗ್ರಾಹಕನ ಮೇಲೆ ಹಲ್ಲೆ ನಡೆಸಿ ದೌರ್ಜನ್ಯವೆಸಗಿದ ಖಾಸಗಿ ಶಾಲೆಯ ಮುಖ್ಯಸ್ಥರ ಕೃತ್ಯವನ್ನು ರೋಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಭೆ ಸೇರಿ ಖಂಡಿಸಿದೆ. ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮಾತನಾಡಿ, ಪತ್ರಕರ್ತರ ಮೇಲೆ ಸಮಾಜದಲ್ಲಿ ಪ್ರತಿಷ್ಠತ ವ್ಯಕ್ತಿಗಳೆಂದು ಗುರುತಿಸಿಕೊಂಡವರು ಇಂತಹ ಹೀನ ಕೃತ್ಯಕ್ಕೆ ಇಳಿದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದರು. ಡಿ.ಜಿ. ಮೋಮಿನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಮೇಲೆ ಒಂದಿಲ್ಲೊಂದು ಹಲ್ಲೆಗಳು ನಡೆಯುತ್ತಿವೆ. ಪತ್ರಕರ್ತರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿ ನಿರ್ಭಿತಿಯಿಂದ ಕೆಲಸ ನಿರ್ವಹಿಸಲು ಅಭದ್ರತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರಿಗೆ ಸೂಕ್ತ ಭದ್ರತೆ ನೀಡಲು ಮುಂದಾಗಬೇಕು ಎಂದರು. ಪತ್ರಕರ್ತ ಎಸ್.ಎಂ. ಸೈಯದ್, ಫಿರೋಜ ಮೋಮಿನ್, ಪಾಂಡುರಂಗ ಶಿಲವೇರಿ ಖಂಡಿಸಿದ್ದಾರೆ.
ಇಂದು ಕಾಂಗ್ರೆಸ್ ರ್ಯಾಲಿ
ಗದಗ:  ಜು. 17ರಂದು ಬೆಳಗ್ಗೆ 11 ಗಂಟೆಗೆ ನಗರದ ಗಾಂಧಿವೃತ್ತದಲ್ಲಿ ಗದಗ ವಿಧಾನಸಭಾ ಮತಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಜನಜಾಗೃತಿ ಮೂಡಿಸುವ ವಿಚಾರವಾಗಿ ಹಾಗೂ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್‌ನ ಜಿಪಂ, ತಾಪಂ, ಗ್ರಾಪಂ, ಎಪಿಎಂಸಿ  ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಹಾಗೂ ನಗರಸಭೆ, ಪಟ್ಟಣ ಪಂಚಾಯ್ತಿ, ಪುರಸಭೆ ಅಧ್ಯಕ್ಷರುಗಳು, ಹಾಗೂ ಸದಸ್ಯರುಗಳು, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ವಿದ್ಯಾರ್ಥಿ ಕಾಂಗ್ರೆಸ್, ಕಾಂಗ್ರೆಸ್ ಸೇವಾದಳ, ಅಲ್ಪಸಂಖ್ಯಾತರ ಘಟಕ, ಎಸ್‌ಸಿ/ಎಸ್‌ಟಿ ಘಟಕದ ಪದಾಧಿಕಾರಿಗಳು ಅಧ್ಯಕ್ಷರುಗಳು, ರಾಜೀವಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಪಾಲ್ಗೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.
ಅರ್ಜಿ ಆಹ್ವಾನ
ಗದಗ:  ಪ್ರಸಕ್ತ ಸಾಲಿನಲ್ಲಿ ರಾಜ್ಯ ಯುವ ನೀತಿ ಅನುಷ್ಠಾನ ಅಡಿಯಲ್ಲಿ ಜೀವನ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಯೋಜನೆ ಅನುಷ್ಠಾನಗೊಳಿಸಬೇಕಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಜೀವನ ಕೌಶಲ್ಯ ತರಬೇತುದಾರರ ತರಬೇತಿ ಶಿಬಿರಗಳನ್ನು ಬೆಂಗಳೂರಿನ ಕುಂಬಳಗೋಡು ಯುವ ಸಬಲೀಕರಣ ಕೇಂದ್ರದಲ್ಲಿ ಜು. 19ರಿಂದ ಪ್ರಾರಂಭಿಸಲಾಗುವುದು. ತರಬೇತಿಯ 10 ದಿನಗಳ ಕಾಲ ಉಚಿತ ತರಬೇತಿ, ವಸತಿ ಮತ್ತು ಊಟದ ವ್ಯವಸ್ಥೆಯನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಗದಗ ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಯೋಜನಾ ಸಮಿತಿಗೆ ಆಯ್ಕೆ
ಗದಗ:  ಜಿಲ್ಲಾ ಯೋಜನಾ ಸಮಿತಿಗೆ ಜಿಪಂ ಕ್ಷೇತ್ರಕ್ಕೆ ಒಟ್ಟು 16 ಸದಸ್ಯರಿದ್ದು, ಈಗಾಗಲೇ 15 ಸದಸ್ಯರು ಆಯ್ಕೆಯಾಗಿದ್ದಾರೆ. ಖಾಲಿ ಉಳಿದ 1 ಕ್ಷೇತ್ರಕ್ಕೆ ಚುನಾವಣೆ ಪ್ರಕ್ರಿಯೆ ನಡೆಸಲಾಗಿದ್ದು, ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಒಂದೇ ಒಂದು ನಾಮಪತ್ರ ಸ್ವೀಕೃತವಾಗಿರುವುದರಿಂದ ಹೇಮಗಿರೀಶ ಗುರುಪಾದಪ್ಪ ಹಾವಿನಾಳ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಚುನಾವಣಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಶ್ವರಪ್ಪನವರಿಗೆ ಸನ್ಮಾನ
ಗದಗ: ಕೆ.ಎಸ್. ಈಶ್ವರಪ್ಪ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಹಾಗೂ ಕೆ.ಎಸ್. ಈಶ್ವರಪ್ಪನವರ ಅಭಿಮಾನಿ ಬಳಗದಿಂದ ಶಿವಮೊಗ್ಗ ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು. ಹಿಂದುಳಿದ ವರ್ಗದ ಮೋರ್ಚಾ ಜಿಲ್ಲಾಧ್ಯಕ್ಷ ನಾಮದೇವ ಚಿಕ್ಕಣ್ಣವರ, ಪ್ರಧಾನ ಕಾರ್ಯದರ್ಶಿ ಅರುಣ ಅಣ್ಣಿಗೇರಿ, ಉಪಾಧ್ಯಕ್ಷೆ ಸುಜಾತಾ ಕಳ್ಳಿಮನಿ, ಮಂಡಲ ಅಧ್ಯಕ್ಷ ಉಮೇಶ ಪೂಜಾರ, ಕೋಶಾಧ್ಯಕ್ಷ ರಮೇಶ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement