ಪಪಂ ಅವ್ಯವಹಾರ: ಲೋಕಾಯುಕ್ತ ತನಿಖೆ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಜು. 16
ನರೇಗಲ್ಲ ಪಟ್ಟಣ ಪಂಚಾಯಿತಿಯಲ್ಲಿ 2005ರಿಂದ 2010ರ ವರೆಗೆ ಕೈಗೊಂಡ ಕಾಮಗಾರಿ ಅವ್ಯವಹಾರ ಕುರಿತು ಮಂಗಳವಾರ ಬೆಂಗಳೂರಿನ ಲೋಕಾಯುಕ್ತ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ. ಸುಬ್ರಹ್ಮಣ್ಯ ಹಾಗೂ ಅಧಿಕಾರಿಗಳು ಆಗಮಿಸಿ ತನಿಖೆ ಕೈಗೊಂಡರು.
ಮೊದಲಿಗೆ ಪಪಂ ಸಭಾಭವನಕ್ಕೆ ಆಗಮಿಸಿ ದೂರುದಾರರನ್ನು ವಿಚಾರಿಸಿ ನಂತರ ಸ್ಥಳದಲ್ಲಿದ್ದ ಪಪಂ ಮುಖ್ಯಾಧಿಕಾರಿ ಎಂ. ವಿಜಯಲಕ್ಷ್ಮಿ ಅವರಿಂದ ಅವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿ ಪಡೆದರು. ನರೇಗಲ್ಲ ವಾರ್ಡ್ಗಳಲ್ಲಿ ನಿರ್ಮಿಸಿದ ಸಿಸಿ ರಸ್ತೆ ಹಾಗೂ ಗಟಾರ ಕಾಮಗಾರಿಗಳ ಪರಿಶೀಲನೆಗೆ ತೆರಳಿ ಪರಿಶೀಲಿಸುವ ವೇಳೆ ಸಮರ್ಪಕ ಕಾಮಗಾರಿ ನಡೆಯದಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು. ಕಾಮಗಾರಿಗಳ ಗುಣಮಟ್ಟ ಹಾಗೂ ಅದರ ಅಳತೆಗಳಲ್ಲಿನ ವ್ಯಾಸವನ್ನು ಕಂಡು ಲೋಕಾಯುಕ್ತರು ಕೋಪಗೊಂಡರು.
ಪಪಂ ಮುಖ್ಯಾಧಿಕಾರಿಗಳಿಗೆ ಈ ಕಾಮಗಾರಿಗಳ ದಾಖಲೆಗಳ ಬಗ್ಗೆ ವಿಚಾರಿಸಿದಾಗ ನಾನು ಈಗ ತಾನೆ ಇಲ್ಲಿಗೆ ಬಂದಿದ್ದೇನೆ. ನೀವು ಕೇಳುವ ಯಾವುದೇ ದಾಖಲೆಗಳು ನನಗೆ ಸಿಗುತ್ತಿಲ್ಲ ಎಂದು ಹಾರಿಕೆಯ ಉತ್ತರ ನೀಡಿದರು.
ಸುಲಭ ಶೌಚಾಲಯಗಳು ಕಾರ್ಯ ನಿರ್ವಹಣೆಯಿಲ್ಲದ್ದನ್ನು ಕಂಡು ಲೋಕಾಯುಕ್ತರು ಕೆಂಡಾಮಂಡಲವಾದರು. ಪ್ರತಿ ಶೌಚಾಲಯಕ್ಕೆ ರು. 6.9 ಲಕ್ಷ ಖರ್ಚಾಗಿದ್ದು, ಇಂತಹ 6 ಶೌಚಾಲಯಗಳು ಪಪಂ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿವೆ. 2007-08 ರಲ್ಲಿ ನಿರ್ಮಾಣಗೊಂಡಿರುವ ಈ ಶೌಚಾಲಯಗಳು ಇಂದಿಗೂ ಸಾರ್ವಜನಿಕರ ಉಪಯೋಗಕ್ಕೆ ಬಾರದಿರುವುದನ್ನು ಕಂಡು ಲೋಕಾಯುಕ್ತರು ಪೌರಾಯುಕ್ತರನ್ನು ತರಾಟೆಗೆ ತಗೆದುಕೊಂಡರು.
ಲೋಕಾಯುಕ್ತರು ಏನೇ ದಾಖಲೆಗಳನ್ನು ಕೇಳಿದರೂ ಮುಖ್ಯಾಧಿಕಾರಿ ಮಾತ್ರ ಅವಾವೂ ನನ್ನ ಬಳಿ ಇಲ್ಲ. ಎಲ್ಲವೂ ಹಿಂದಿನ ಎಂಜಿನಿಯರ್ ಬಳಿ ಇವೆ. ಇನ್ನು ಕೆಲವು ದಾಖಲೆಗಳನ್ನು ಸೀಜ್ ಮಾಡಿದ್ದಾರೆ ಎಂದು ಹೇಳಿ ಜಾರಿಕೊಳ್ಳಲು ನೋಡಿದರು. ಇಲ್ಲಿ ಅಧಿಕಾರ ಸ್ವೀಕರಿಸಿದಾಗ ಅವೆಲ್ಲವನ್ನೂ ನೀವು ಪಡೆದುಕೊಳ್ಳಬೇಕಿತ್ತು. ಇದು ನಿಮ್ಮ ಕರ್ತವ್ಯ ಲೋಪವನ್ನು ತೋರಿಸುತ್ತದೆ. ದಾಖಲೆಗಳನ್ನು ಸೀಜ್ ಮಾಡಿದ್ದು ಯಾರು? ಎಂದು ಪರಿಶೀಲನೆ ಮಾಡಿದಾಗ ಅದರ ಮೇಲೆ ಕೇವಲ ಪಪಂ ಹಿಂದಿನ ಮುಖ್ಯಾಧಿಕಾರಿ ಸಹಿ ಮಾತ್ರ ಇದ್ದು, ಯಾವುದೇ ಪೊಲೀಸರ, ಅಧಿಕಾರಿಗಳ ಸಹಿಗಳು ಇರಲಿಲ್ಲ. ತಕ್ಷಣವೇ ಅವುಗಳನ್ನು ತೆಗೆದು ದಾಖಲೆಗಳನ್ನು ಒದಗಿಸಬೇಕೆಂದು ಆದೇಶಿಸಿದ ಲೋಕಾಯುಕ್ತರು, ಪಪಂ ದಾಖಲೆಗಳೆಲ್ಲವನ್ನೂ ಎಂಜಿನಿಯರ್ ಕಡೆಗೆ ಕೊಡಲು ನಿಮಗೆ ಅಧಿಕಾರ ಕೊಟ್ಟವರಾರು? ಎಂದು ಪ್ರಶ್ನಿಸಿದರು.
ಪಪಂನ ಮಾಜಿ ಅಧ್ಯಕ್ಷ ದಾವುದಲಿ ಕುದರಿ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಸುಂಕಪ್ಪ ನವಲಗುಂದ ಹಾಗೂ ಇತರ ಸಾರ್ವಜನಿಕರು ವಿವಿಧ ವಾರ್ಡ್ಗಳಲ್ಲಿ ನಡೆದ ಕಳಪೆ ಕಾಮಗಾರಿಗಳ ಬಗ್ಗೆ ದೂರು ನೀಡಿದರು. ನಂತರ ಇಲ್ಲಿನ ನರಗುಂದ ಖಾನಾವಳಿಯಿಂದ ಈರಣ್ಣನ ಪಾದಗಟ್ಟಿವರೆಗಿನ ಡಾಂಬರೀಕರಣ ಕಳಪೆ ಹಾಗೂ ಗಟಾರ ಮೇಲೆ ಕಾಂಕ್ರೀಟ್ ನಿರ್ಮಾಣವಾಗದ ಸ್ಥಳಕ್ಕೆ ಆಗಮಿಸಿ ಅಳತೆಯೊಂದಿಗೆ ಪರಿಶೀಲಿಸಿದರು.