ಬೇಡಿಕೆ ಈಡೇರಿಸಲು ರೈತಸಂಘ ಆಗ್ರಹ
ಮುಂಡರಗಿ: ತಾಲೂಕು ರೈತಸಂಘ ಮತ್ತು ಹಸಿರು ಸೇನೆಯು ಬುಧವಾರ ಇಲ್ಲಿನ ತಹಸೀಲ್ದಾರ್ ಕಚೇರಿಗೆ ತೆರಳಿ ರೈತರ ಸಮಸ್ಯೆಗಳನ್ನು ಈಡೇರಿಸುವ ಅನೇಕ ಬೇಡಿಕೆಗಳ ಕುರಿತು ತಾಲೂಕು ದಂಡಾಧಿಕಾರಿಗಳಿಗೆ ಮನವಿ ನೀಡಿದರು.
ಮುಂಡರಗಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು, ಬರಗಾಲ ಪರಿಹಾರವನ್ನು ರೈತರಿಗೆ ಕೂಡಲೇ ವಿತರಿಸಬೇಕು, ಶೀಘ್ರವೇ ಜಿಂಕೆಗಳಿಂದ ಬೆಳೆಹಾನಿಗೊಳಗಾದ ರೈತರಿಗೆ ಪರಿಹಾರ ಕೊಡಬೇಕು, ರೈತರ ಬೆಳೆಗಳಿಗೆ ಹಾನಿಯುಂಟು ಮಾಡುವ ಮಂಗಗಳನ್ನು ಸೆರೆಹಿಡಿದು ಸ್ಥಳಾಂತರಿಸಬೇಕು, ಗ್ರಾಮೀಣ ಪ್ರದೇಶಗಳಿಗೆ ನಿರಂತರ ಜ್ಯೋತಿ ಅಳವಡಿಸಿದಂತೆ ರೈತರ ಪಂಪ್ಸೆಟ್ಗಳಿಗೂ ಅಳವಡಿಸಬೇಕು, ಸರ್ಕಾರದಿಂದ ಕೂಡಲೇ ಮೇವು ಬ್ಯಾಂಕ್ ಸ್ಥಾಪಿಸಬೇಕು, ಸರ್ಕಾರದ ಸುತ್ತೋಲೆ ಇಲ್ಲದೆ, ವಾರಸಾ, ಹಕ್ಕು ಬಿಟ್ಟಪತ್ರ ಇವೆಲ್ಲವನ್ನು ಕಡ್ಡಾಯವಾಗಿ ನೋಂದಣಿ ಮಾಡುವುದು ಸೇರಿದಂತೆ ಎಲ್ಲ ಬೇಡಿಕೆಗಳ ಈಡೇರಿಸಬೇಕು. ಒಂದು ವೇಳೆ ಮನವಿಗೆ ಸ್ಪಂದಿಸದೇ ಇದ್ದಲ್ಲಿ ಹೋರಾಟ ಮಾಡುವುದು ಅಥವಾ ಮುತ್ತಿಗೆ ಹಾಕಿ ಧರಣಿ ಸತ್ಯಾಗ್ರಹ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು. ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕುರಿ, ಮಂಜಪ್ಪ ಜೋಳದ, ಬೀರಪ್ಪ ಮಲ್ಲಾರ್ಜಿ, ನಿಂಗಪ್ಪ ಭಂಡಾರಿ, ರೈತ ಮುಖಂಡ ಚಂದ್ರಕಾಂತ ಉಳ್ಳಾಗಡ್ಡಿ, ಹಸಿರು ಸೇನೆ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ, ಬಸವರಾಜ ನವಲಗುಂದ, ದೇವಪ್ಪ ಇಟಗಿ, ನಾಗರಾಜ ಮುರಡಿ, ದೇವಪ್ಪ ಗೋಣಿಸ್ವಾಮಿ, ಎಂ.ಆರ್. ಗುಡ್ಡದ, ನಾಗರಾಜ ಜೋಳದ, ದೀಪಕ್ಕುಮಾರ ಹಲವಾಗಲಿ, ಗುಡದಪ್ಪ ಉಪಸ್ಥಿತರಿದ್ದರು.