ಶಿರಹಟ್ಟಿ ಪಪಂ ಅವ್ಯವಹಾರ ತನಿಖೆ
ಶಿರಹಟ್ಟಿ: ಶಿರಹಟ್ಟಿ ಪಟ್ಟಣ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರದ ಕುರಿತು ಉಪವಿಭಾಗಾಧಿಕಾರಿ ಇಸ್ಲಾವುದ್ದೀನ ಗದ್ಯಾಳ ಬುಧವಾರ ತನಿಖೆ ಆರಂಭಿಸಿದ್ದಾರೆ. 2-3 ದಿನಗಳಲ್ಲಿ ಎಲ್ಲ ಕಡತಗಳನ್ನು ಪರಿಶೀಲನೆ ಮಾಡಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
3-4 ವರ್ಷಗಳ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸದ್ಯ ತನಿಖಾ ಹಂತ ಪ್ರಾರಂಭವಾಗಿದ್ದು, ಕಡತಗಳನ್ನು ಪರಿಶೀಲಿಸಲಾಗಿ ಅವ್ಯವಹಾರ ಮತ್ತು ಭ್ರಷ್ಟಾಚಾರದ ಕುರಿತು ಯಾದಿ ತಯಾರಿಸಿಕೊಳ್ಳುತ್ತಿದ್ದು, ಯಾವುದಕ್ಕೂ ಸ್ಪಷ್ಟನೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾ ನಿರ್ದೇಶಕ ರಮೇಶ ದೇಸಾಯಿ ಮತ್ತು ಇತರ ಸಿಬ್ಬಂದಿಯೂ ಆಶ್ರಯ ಮನೆ ಹಂಚಿಕೆಯ ಸಹಾಯಧನದ ಚೆಕ್ ವಿತರಣೆಯಲ್ಲಿ ನಡೆದಿದೆ ಎನ್ನಲಾದ ವ್ಯಾಪಕ ಭ್ರಷ್ಟಾಚಾರದ ಬಗ್ಗೆಯೂ ಸ್ಥಳೀಯ ಸಿಬ್ಬಂದಿಯಿಂದ ಎಲ್ಲ ಮಾಹಿತಿ ಪಡೆದುಕೊಂಡು ಸಮಗ್ರ ವರದಿ ನೀಡಲಿದ್ದಾರೆ. ತನಿಖಾ ಹಂತದಲ್ಲಿ ಜಿಲ್ಲಾಧಿಕಾರಿ ಕಾರ್ಯಾಲಯದ ಸಿಬ್ಬಂದಿ ಕೇಳಿದ ಎಲ್ಲ ಮಾಹಿತಿಯನ್ನು ಒಪ್ಪಿಸುವಂತೆ ತಾಕೀತು ಮಾಡಲಾಗಿದೆ. ದೂರುದಾರರು ಮತ್ತು ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಆಸ್ಪದ ನೀಡದೇ ತನಿಖಾ ಸಿಬ್ಬಂದಿಗೆ ಸಹಕಾರ ನೀಡಬೇಕು. ತನಿಖಾ ಸಿಬ್ಬಂದಿ ನೀಡುವ ವರದಿ ಪರಿಶೀಲಿಸಿ ಜಿಲ್ಲಾಧಿಕಾರಿ ಮುಂದಿನ ಕ್ರಮ ಕೈಗೊಳ್ಳುವ ಕುರಿತು ನಿರ್ಧರಿಸಲಿದ್ದು, ಸದ್ಯ ಯಾವುದಕ್ಕೂ ಉತ್ತರಿಸುವುದಿಲ್ಲ ಎಂದು ಉಪವಿಭಾಗಾಧಿಕಾರಿ ಸ್ಪಷ್ಟನೆ ನೀಡಿದರು.