ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಘನತ್ಯಾಜ್ಯ ಘಟಕಕ್ಕೆ ರು. 1.5 ಕೋಟಿ: ಅಚ್ಚರಿ

Lingaraj Badiger
Updated On : 18 Jul 2014, 11:25 am

ಕನ್ನಡಪ್ರಭ ವಾರ್ತೆ, ನರೇಗಲ್ಲ, ಜು. 17
ನರೇಗಲ್ಲ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಪಟ್ಟಣ ಪಂಚಾಯಿತಿ ರು. 1.5 ಕೋಟಿ ವೆಚ್ಚ ಮಾಡಿರುವುದಕ್ಕೆ ಲೋಕಾಯುಕ್ತ ಕಾರ್ಯಪಾಲಕ ಎಂಜಿನಿಯರ್ ಕೆ. ಸುಬ್ರಹ್ಮಣ್ಯ ಕಾರಂತ ಆಶ್ಚರ್ಯ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆದಿದೆ.
ನರೇಗಲ್ಲ ಪಪಂನಲ್ಲಿ 2005 ರಿಂದ 2011ರ ಅವಧಿಯಲ್ಲಿ ನಡೆದಿರುವ ಅವ್ಯವಹಾರ ಮತ್ತು ಕಳಪೆ ಕಾಮಗಾರಿಗಳ ಕುರಿತು ಇಲ್ಲಿನ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಹುಲಗಪ್ಪ ಬಂಡಿವಡ್ಡರ ನೀಡಿದ ದೂರಿನನ್ವಯ 2 ದಿನಗಳಿಂದ ಪಟ್ಟಣದಲ್ಲಿ ಲೋಕಾಯುಕ್ತರು ಪರಿಶೀಲನೆ ನಡೆಸಿದರು. ಒಂದೂವರೆ ಕೋಟಿ ಹಣವನ್ನೇನೋ ವೆಚ್ಚ ಮಾಡಿದ್ದಾರೆ. ಆದರೆ ಅದು ಸಮರ್ಪಕವಾಗಿ ಬಳಕೆಯಾಗಿಲ್ಲ. ಹೀಗೆ ಸಾರ್ವಜನಿಕರ ಹಣ ಪೋಲಾಗಲು ಯಾರು ಜವಾಬ್ದಾರಿ? ಎಂದು ಮುಖ್ಯಾಧಿಕಾರಿ ಎಂ. ವಿಜಯಲಕ್ಷ್ಮಿಯವರನ್ನು ಪ್ರಶ್ನಿಸಿದರು.
ಘನತ್ಯಾಜ್ಯ ಘಟಕದ ವಾಚ್‌ಮನ್ ಶೆಡ್‌ಗೆ ಮೂರುವರೆ ಲಕ್ಷ ರು. ವೆಚ್ಚ ಮಾಡಲಾಗಿದೆ ಎಂಬುದನ್ನು ಕಡತಗಳಿಂದ ತಿಳಿದುಕೊಂಡ ಲೋಕಾಯುಕ್ತರು, ಸ್ಥಳದಲ್ಲಿ ಹಾಜರಿದ್ದ ಗುತ್ತಿಗೆದಾರರನ್ನು ಪ್ರಶ್ನಿಸಲಾಗಿ ಈ ಕಾಮಗಾರಿಯಲ್ಲಿ ನನಗೆ ಕೇವಲ ರು. 80 ಸಾವಿರ ಮಾತ್ರ ಸಂದಾಯವಾಗಿದೆ ಎಂದು ಹೇಳಿದರು.
ಮಜರೆ ಗ್ರಾಮ ತೋಟಗಂಟಿಗೆ ತೆರಳಿದ ಲೋಕಾಯುಕ್ತರು ಅಲ್ಲಿನ ವಾಜಪೇಯಿ ವಸತಿ ಮನೆಗಳನ್ನು ಕಂಡು ಬೆರಗಾದರು. ಫಲಾನುಭವಿಗಳು ಹೇಳುತ್ತಿರುವುದಕ್ಕೂ, ಅಲ್ಲಿನ ಮನೆಗಳಿಗೂ ಯಾವುದೇ ತಾಳೆಯಾಗದಿರುವದನ್ನು ಕಂಡ ಲೋಕಾಯುಕ್ತರು ಕಾಮಗಾರಿ ಬಗ್ಗೆ ಅಚ್ಚರಿಗೊಂಡರು. ಇದೇ ಪರಿಸ್ಥಿತಿ ನರೇಗಲ್ಲದಲ್ಲಿಯೂ ಕಂಡು ಬಂದಿತು. ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ 462 ಫಲಾನುಭವಿಗಳಿಗೆ ತಲಾ ರು. 50 ಸಾವಿರ  ಸಹಾಯಧನ ನೀಡಲಾಗಿದೆ. ಮನೆ ಸಮರ್ಪಕವಾಗಿ ನಿರ್ಮಿಸದಿರುವುದು ಲೋಕಾಯುಕ್ತರ ಗಮನಕ್ಕೆ ಬಂದಿತು.
ಯಾವುದೋ ಕಟ್ಟಡ ತೋರಿಸಿ ತಮ್ಮ ಮನೆಯೆಂದು ಹೇಳುತ್ತಿರುವುದನ್ನು ಕೇಳಿದ ಲೋಕಾಯುಕ್ತರು ಇಲ್ಲಿ ಲೆಕ್ಕಕ್ಕೆ ಮತ್ತು ಕಾಮಗಾರಿಗೆ ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎಂದರು. ನಾಗಪ್ಪನ ಖಾನಾವಳಿಯಿಂದ ವೀರಣ್ಣನ ಪಾದಗಟ್ಟೆಯವರೆಗಿನ ರಸ್ತೆಯನ್ನು ಲೋಕಾಯುಕ್ತರು ಇಂದು ಮತ್ತೆ ಅಳತೆ ಮಾಡಿದರು. ಅಲ್ಲಿಯೂ ಕಳಪೆ ಕಾಮಗಾರಿ ಕಂಡ ಲೋಕಾಯುಕ್ತರು ಈ ಹಿಂದಿನ ಅಧಿಕಾರಿಗಳು ಏನೆಲ್ಲ ಅವಾಂತರ ಮಾಡಿದ್ದಾರೆ ಎಂದು ಉದ್ಗಾರ ತೆಗೆದರು.
15 ದಿನಗಳ ಹಿಂದೆಯೇ ಇಲ್ಲಿಗೆ ಬರುವ ಬಗ್ಗೆ ನಿಮಗೆ ಮಾಹಿತಿ ನೀಡಿದ್ದೇವೆ. ಆದರೆ ನೀವುಗಳು ಮಾತ್ರ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆಗಿನ ಎಂಜಿನಿಯರ್ ಮತ್ತು ಅಧಿಕಾರಿಗಳಿಂದ ಪಡೆಯುವಲ್ಲಿ ವಿಫಲರಾಗಿದ್ದೀರಿ ಎಂದು ಎಂಜಿನಿಯರ್ ಉಳ್ಳಟ್ಟಿಯವರನ್ನು ತರಾಟೆಗೆ ತೆಗದುಕೊಂಡರು. ಏನಾದರೂ ಸರಿ ಇನ್ನು ಒಂದು ವಾರದಲ್ಲಿ ಎಲ್ಲ ದಾಖಲೆಗಳನ್ನು ನೀವು ಖುದ್ದಾಗಿ ನಮಗೆ ಒದಗಿಸಬೇಕು ಎಂದು ಲೋಕಾಯುಕ್ತರು ಮುಖ್ಯಾಧಿಕಾರಿ ಮತ್ತು ಎಂಜಿನಿಯರ್‌ಗೆ ತಾಕೀತು ಮಾಡಿದರು. ಈ ಸಂದರ್ಭದಲ್ಲಿ ದೂರುದಾರ ಹುಲಿಗಪ್ಪ ಬಂಡಿವಡ್ಡರ, ವೀರೇಶ ಮಣ್ಣೊಡ್ಡರ, ಗುತ್ತಿಗೆದಾರರು, ಪಪಂ ಸಿಬ್ಬಂದಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement