ಮುಂಡರಗಿ ತಾಪಂ ಅಧ್ಯಕ್ಷರಾಗಿ ಲಲಿತಾ, ಉಪಾಧ್ಯಕ್ಷರಾಗಿ ರಾಜಶೇಖರ ಆಯ್ಕೆ
ಮುಂಡರಗಿ: ಮುಂಡರಗಿ ತಾಲೂಕು ಪಂಚಾಯಿತಿ ಮೂರನೇ ಅವಧಿಗೆ ಅಧ್ಯಕ್ಷರಾಗಿ ಲಲಿತಾ ಚೆನ್ನಪ್ಪಗೌಡ್ರ, ಉಪಾಧ್ಯಕ್ಷರಾಗಿ ರಾಜಶೇಖರ ರಾಠೋಡ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನವು ಹಿಂದುಳಿದ ಬ ವರ್ಗಕ್ಕೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಕಾಂಗ್ರೆಸ್ 5 ಹಾಗೂ ಬಿಜೆಪಿ 6 ಸದಸ್ಯರ ಬೆಂಬಲ ಹೊಂದಿದೆ. ಅಧ್ಯಕ್ಷ ಸ್ಥಾನಕ್ಕಾಗಿ ಪೇಟಾಲೂರು ತಾಪಂ ಸದಸ್ಯೆ ಕಾಂಗ್ರೆಸ್‌ನ ಲಲಿತಾ ನಾಗನಗೌಡ ಚೆನ್ನಪ್ಪಗೌಡ್ರ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿ ಸದಸ್ಯ ರಾಜಶೇಖರ ರಾಠೋಡ ಪ್ರತ್ಯೇಕವಾಗಿ ಎರಡು ನಾಮಪತ್ರ, ಕಾಂಗ್ರೆಸ್‌ನ ರಾಮಾಂಜನೇಯರಾಜು ಪೆನ್‌ಮತ್ಸ ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ 2 ಗಂಟೆಗೆ ಚುನಾವಣಾಧಿಕಾರಿ ಐ.ಜಿ. ಗದ್ಯಾಳ ಅಭ್ಯರ್ಥಿಗಳ ನಾಮಪತ್ರ ಪರಿಶೀಲಿಸಿದರು. ನಂತರ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಸದಸ್ಯ ರಾಮಾಂಜನೇಯರಾಜು ಪೆನ್‌ಮತ್ಸ ತಮ್ಮ ನಾಮಪತ್ರವನ್ನು ವಾಪಸ್ ಪಡೆದರು.
ಆನಂತರ ಚುನಾವಣಾಧಿಕಾರಿಗಳು ಅಧ್ಯಕ್ಷರಾಗಿ ಲಲಿತಾ ಚೆನ್ನಪ್ಪಗೌಡ್ರ ಹಾಗೂ ಬಿಜೆಪಿಯ ರಾಜಶೇಖರ ರಾಠೋಡ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಬಿಜೆಪಿ ಸದಸ್ಯರಾದ ನಿಂಗಬಸಪ್ಪ ಪ್ಯಾಟಿ, ಅಕ್ಕಮಹಾದೇವಿ ಹಾರೋಗೇರಿ, ತಾರೂಬಾಯಿ ಚವ್ಹಾಣ, ಸಿದ್ದಲಿಂಗನಗೌಡ ಪಾಟೀಲ, ಹೇಮಾವತಿ ನಾಯಕ ಹಾಗೂ ಕಾಂಗ್ರೆಸ್ ಸದಸ್ಯರಾದ ಪಿ.ಎಂ. ಪಾಟೀಲ, ಹುಲಿಗೆವ್ವ ಗಾಂಜೀ, ನೂರಜಹಾನ್ ಮುಂಡರಗಿ, ತಹಸೀಲ್ದಾರ್ ಡಿ.ಐ. ಹೆಗ್ಗೊಂಡ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಿ. ಮೋಹನ್ ಉಪಸ್ಥಿತರಿದ್ದರು.