ಹುಲಿಗುಡ್ಡ ಏತ ನೀರಾವರಿ: ಹೆಚ್ಚಿನ ಪರಿಹಾರಕ್ಕೆ ಆಗ್ರಹ
ಮುಂಡರಗಿ: ತಾಲೂಕಿನ ಮಹತ್ವಾಕಾಂಕ್ಷಿ ಸಿಂಗಟಾಲೂರು ಹುಲಿಗುಡ್ಡ ಏತ ನೀರಾವರಿ ಯೋಜನೆಗೆ ಮೇವುಂಡಿ ಗ್ರಾಮದ ಹತ್ತಿರ ದೊಡ್ಡ ಕಾಲುವೆ ನಿರ್ಮಾಣಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿನ ರೈತರು ಭೂಮಿ ಕಳೆದುಕೊಳ್ಳುತ್ತಿದ್ದು, ಸರ್ಕಾರದ ಪರಿಹಾರದ ಕುರಿತು ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಆಕ್ಷೇಪಣೆ ಸಲ್ಲಿಸಿದ್ದು, ರೈತರಿಗೆ ನ್ಯಾಯ ಒದಗಿಸಿಕೊಡುವಂತೆ ಗುರುವಾರ ತಾಲೂಕಿನ ಮೇವುಂಡಿ ರೈತರು ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ಏತನೀರಾವರಿ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ.
ಯೋಜನೆಗಾಗಿ ಭೂಮಿಯನ್ನು ಕಳೆದುಕೊಂಡ ರೈತರ ಬೆಳೆಪರಿಹಾರ ಧನವನ್ನು ಹೆಚ್ಚಿಸಬೇಕು, ಈ ಜಮೀನುಗಳಿಗೆ ನಿಗದಿ ಮಾಡಿದ ದರಕ್ಕಿಂತ ಹೆಚ್ಚಿನ ಬೆಲೆ ನೀಡಬೇಕು, ಭೂಸ್ವಾಧೀನವಾದ ಜಮೀನುಗಳ ಹಣವನ್ನು ನಿಗದಿತ ಸಮಯದಲ್ಲಿ ನೀಡಬೇಕು, ಸಂಪೂರ್ಣ ಭೂಮಿ ಕಳೆದುಕೊಂಡ ರೈತರಿಗೆ ಪುನರ್ವಸತಿ ಕಲ್ಪಿಸಬೇಕು ಹಾಗೂ ಅವರಿಗೆ ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ ನೀಡಬೇಕು, ಜಮೀನುಗಳಲ್ಲಿರುವ ಕೊಳವೆಬಾವಿ, ಮೋಟರ್ ಹಾಗೂ ಪಂಪ್ಹೌಸ್, ಪೈಪ್ಲೈನ್ಗಳಿಗೆ ಸೂಕ್ತವಾದ ಪರಿಹಾರ ನೀಡಬೇಕು ಎನ್ನುವ ಎಲ್ಲ ಬೇಡಿಕೆಗಳ ಕುರಿತು ಅಧಿಕಾರಿಗಳು ಕೂಲಂಕಷ ಚರ್ಚಿಸಿ ರೈತರಿಗೆ ಯೋಗ್ಯ ಪರಿಹಾರ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಈಶಪ್ಪ ಜಂತ್ಲಿ, ಈರಣ್ಣ ಸಜ್ಜನರ, ಮಲ್ಲಣ್ಣ ಶಿಂಗಟಾಲೂರ, ಚೆನ್ನವೀರಪ್ಪ ಚಿನ್ನೂರ, ಹನಮಂತಪ್ಪ ಉಪ್ಪಾರ, ಶಿವಪುತ್ರಪ್ಪ ಕಿನ್ನಾಳ, ಶೇಖಪ್ಪ ಆಲೂರ, ಮಾರುತೆಪ್ಪ ಉಪ್ಪಾರ, ನಾಗಪ್ಪ ತಳವಾರ, ನಿಂಗಜ್ಜ ಸೋಗಿ, ಚೆನ್ನಬಸನಗೌಡ ಪಾಟೀಲ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.