ಗ್ರಾಹಕರಿಗೆ ತೊಂದರೆ: ಕೆನರಾ ಬ್ಯಾಂಕ್ ವಿರುದ್ಧ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜು. 18
ಗ್ರಾಹಕರಿಗೆ ಸರಿಯಾದ ಸೌಲಭ್ಯಗಳನ್ನು ಒದಗಿಸುವುದು ಬ್ಯಾಂಕುಗಳ ಆದ್ಯ ಕರ್ತವ್ಯವಾಗಿದ್ದು, ಬ್ಯಾಂಕಿನಲ್ಲಿ ಇಟ್ಟಿರುವ ಹಣ ತೆಗೆಯಲು ಹಾಗೂ ತುಂಬಲು ಹೋದಾಗ ಗಂಟೆಗಟ್ಟಲೆ ಕಾಯುತ್ತ ಕೂರಬೇಕಾದ ಸ್ಥಿತಿ ಉಂಟಾಗಿದ್ದು, ಇದರಿಂದ ಗ್ರಾಹಕರಿಗೆ ಸಾಕಷ್ಟು ಕಿರಿಕಿರಿಯಾಗುತ್ತಿದ್ದು, ಬ್ಯಾಂಕಿನ ಅಧಿಕಾರಿಗಳು ಈ ಬಗ್ಗೆ ಸ್ಪಂದಿಸುತ್ತಿಲ್ಲವೆಂದು ಶಿಗ್ಲಿಯ ಕೆನರಾ ಬ್ಯಾಂಕ್ ಗ್ರಾಹಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಬ್ಯಾಂಕ್ ಗ್ರಾಹಕ ಸುನೀಲ ತೋಟದ ಮಾತನಾಡಿ, ಪ್ರತಿಸಲ ಬ್ಯಾಂಕಿಗೆ ಬಂದಾಗ ಕಂಪ್ಯೂಟರ್ನ ಸಿಪಿಯು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ನೆಟ್ನ ಸರ್ವರ್ ಬ್ಯುಸಿ ಇದೆ. ಕರೆಂಟ್ ಇಲ್ಲ ಎಲ್ಲವೂ ಇದ್ದರೆ ಸಿಬ್ಬಂದಿ ಗೈರು ಹಾಜರಿ, ಹೀಗೆ ಹಲವಾರು ಸಮಸ್ಯೆಗಳನ್ನು ಹೇಳುತ್ತಾ ಬ್ಯಾಂಕ್ ಸಿಬ್ಬಂದಿ ಗ್ರಾಹಕರನ್ನು ತಾಸುಗಟ್ಟಲೆ ಕಾಯಿಸುತ್ತಾರೆ. ಬ್ಯಾಂಕ್ಗೆ ಬರುವುದೆಂದರೆ ದಿನದ ಕೆಲಸ ಮರೆತ ಹಾಗೆ ಎನ್ನುತ್ತಾರೆ.
ಇನ್ನೂ ಹಲವಾರು ದಿನಗಳಿಂದ ರೈತರಿಗೆ ನೀಡಬೇಕಾದ ಬೆಳೆಸಾಲವನ್ನು ಸೂಕ್ತ ಕಾಲದಲ್ಲಿ ನೀಡದೆ ಸತಾಯಿಸುತ್ತಾರೆ. ಇದರಿಂದ ರೈತರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಬ್ಯಾಂಕ್ ಸಿಬ್ಬಂದಿ ಗ್ರಾಹಕರ ವ್ಯವಹಾರದ ಮೇಲೆ ಅವಲಂಬಿತರಾಗಿರುತ್ತಾರೆ ಎನ್ನುವ ಪರಿಜ್ಞಾನ ಇಲ್ಲದೆ ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸುವುದು ಸರಿಯಲ್ಲ ಎಂದು ಭರಮಣ್ಣ ರೊಟ್ಟಿಗವಾಡ ಆಕ್ರೋಶ ವ್ಯಕ್ತಪಡಿಸಿದರು. ಆದೇಶ ಹುಲಗೂರ, ಟೋಪಣ್ಣ ಲಮಾಣಿ, ಅಶೋಕ ವಡವಿಹೊಸೂರ, ಟಿ.ವಿ. ಕನ್ನೂರ, ಮಹಾದೇವಪ್ಪ ಬದಾಮಿ, ನಾರಾಯಣ ಬಂಕಾಪುರ, ರತ್ನವ್ವ ತಳಗೇರಿ, ಗಿರಿಜವ್ವ ಇಚ್ಚಂಗಿ, ಲಕ್ಷ್ಮಣ ಮಲ್ಲಾಡದ, ನಂದೀಶ ಬಂಡಿವಾಡ, ವಿ.ಬಿ. ಕುಬಸದ ಇತರರು ಶಿಗ್ಲಿ ಕೆನರಾ ಬ್ಯಾಂಕ್ ವಿರುದ್ಧ ಹರಿಹಾಯ್ದರು.