ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಿವೇಶನಕ್ಕೆ ಆಗ್ರಹಿಸಿ ಗ್ರಾಪಂ ಮುಂದೆ ವೃದ್ಧೆಯ ಧರಣಿ

Lingaraj Badiger
Updated On : 19 Jul 2014, 10:59 am

ಲಕ್ಷ್ಮೇಶ್ವರ: 23 ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ನೀಡಿದ್ದ ಆಶ್ರಯ ನಿವೇಶನದಲ್ಲಿ ಬೇರೊಬ್ಬರು ವಾಸಿಸುತ್ತಿದ್ದು, ಸದರಿ ನಿವೇಶನವನ್ನು ನಮಗೆ ಬಿಡಿಸಿಕೊಡುವಂತೆ ಶಿಗ್ಲಿ ಗ್ರಾಮದ ವೃದ್ಧೆ ಲಚ್ಚಕ್ಕ ತನಕಂಠಿ ಗ್ರಾಮ ಪಂಚಾಯಿತಿ ಮುಂದೆ ಶುಕ್ರವಾರ ಧರಣಿ ಆರಂಭಿಸಿದ್ದಾರೆ.
ಶಿಗ್ಲಿ ಗ್ರಾಮ ಪಂಚಾಯಿತಿಯಲ್ಲಿ 1991ರ ನವೆಂಬರ 19ರಂದು ಲಚ್ಚಕ್ಕ ತನಕುಂಠಿ ಇವರಿಗೆ ರಿಸನಂ 124/1 ರ ಆಶ್ರಯ ಕಾಲೋನಿಯಲ್ಲಿ 30 ಹಾಗೂ 40 ಅಳತೆಯ 13 ನಂಬರ್ ನಿವೇಶನದ ಹಕ್ಕುಪತ್ರದ ಪಟ್ಟಾ ನೀಡಲಾಗಿದೆ. ಆದರೆ, ಲಚ್ಚಕ್ಕನಿಗೆ ನೀಡಲಾದ ನಿವೇಶನದಲ್ಲಿ ಬೇರೊಬ್ಬರು ಅನಧಿಕೃತವಾಗಿ ವಾಸಿಸುತ್ತಿದ್ದು, ಅವರನ್ನು ತೆರವುಗೊಳಿಸಿ ತನ್ನ ನಿವೇಶನ ತನಗೆ ದೊರಕಿಸಿಕೊಡಬೇಕು ಎಂದು ಗ್ರಾಪಂ ಪಿಡಿತಿ, ಇತಿ ಹಾಗೂ ಗ್ರಾಪಂ ಅಧ್ಯಕ್ಷರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದು, ಇದುವರೆಗೂ ಪರಿಹಾರ ದೊರೆಯದ ಕಾರಣ ವೃದ್ಧೆಯ ಮನವಿಗೆ ಸ್ಪಂದಿಸದ ಅಧಿಕಾರಿಗಳ ಹಾಗೂ ಗ್ರಾಮ ಪಂಚಾಯಿತಿ ಕ್ರಮಕ್ಕೆ ಬೇಸತ್ತು ವೃದ್ಧೆ ತನ್ನ ಮಗನೊಂದಿಗೆ ಗಾಂಧೀಜಿ ಭಾವಚಿತ್ರಕ್ಕೆ ಮಾಲೆಹಾಕಿ ಗ್ರಾಪಂ ಎದುರು ಇಳಿವಯಸ್ಸಿನಲ್ಲಿ ಪ್ರತಿಭಟನೆಗೆ ಇಳಿದಿದ್ದಾಳೆ.
ಶಿಗ್ಲಿ ಗ್ರಾಪಂ ಆಡಳಿತ ಮಂಡಳಿಯು ವೃದ್ಧೆಗೆ ನಿವೇಶನ ತೆರವು ಮಾಡಿ ಕೊಡಿಸುವಂತೆ 2014ರ ಮೇ 8ರಂದು ತಾಲೂಕು ಪಂಚಾಯಿತಿಯ ಆಡಳಿತಾಧಿಕಾರಿಗಳು ಲಿಖಿತವಾಗಿ ತಿಳಿಸಿದ್ದರೂ ಕೂಡಾ ವೃದ್ಧೆಗೆ ನಿವೇಶನದ ಜಾಗೆ ತೋರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೋ ಅಥವಾ ಹಣ ಬಲ, ಅಧಿಕಾರ ಬಲ, ತೋಳ್ಬಲಕ್ಕೆ ಹೆದರಿ ಸುಮ್ಮನಾಗಿದ್ದಾರೋ ಗೊತ್ತಾಗುತ್ತಿಲ್ಲ ಎಂದು ವೃದ್ಧೆ ಕಣ್ಣೀರು ಹಾಕುತ್ತ ತನ್ನ ಅಳನ್ನು ತೋಡಿಕೊಂಡಳು.
ತನ್ನ ನಿವೇಶನ ತನಗೆ ನೀಡಬೇಕು. ಇಲ್ಲವೆ ಬದಲಿ ಸ್ಥಳದಲ್ಲಿ ನನಗೆ ನಿವೇಶನ ನೀಡಬೇಕು ಎಂಬುದು ವೃದ್ಧೆಯ ಆಗ್ರಹ. ಪ್ರತಿಭಟನೆಯಲ್ಲಿ ಈರಣ್ಣ ತನಕಂಠಿ, ವಾಸಣ್ಣ ರಜಪೂತ, ಮೋಹನ ಮೂಲಿಮನಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement