ಪಿಎಲ್ಡಿ ಬ್ಯಾಂಕ್ ಸಾಲ ಪಡೆದ ರೈತರಿಗೆ ಅನ್ಯಾಯ
ನರಗುಂದ: ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದ ಕೊನೆಯಲ್ಲಿ ರಾಜ್ಯದಲ್ಲಿ ಅಂದು ಬರಗಾಲ ಉಂಟಾದ ಹಿನ್ನೆಲೆಯಲ್ಲಿ ರೈತರ ಸಂಕಷ್ಟ ಸ್ಥಿತಿ ಮನಗಂಡು ರಾಜ್ಯದ ಎಲ್ಲ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ದೊಡ್ಡ ಹಾಗೂ ಸಣ್ಣ, ಅತಿ ಸಣ್ಣ ರೈತರಿಗೆ ಪ್ರತಿಯೊಬ್ಬ ರೈತರಿಗೆ ರು. 25 ಸಾವಿರ ಸಾಲ ಮನ್ನಾ ಘೋಷಣೆ ಮಾಡಿ 3 ವರ್ಷ ಕಳೆದರೂ ರಾಜ್ಯದ ಪಿಎಲ್ಡಿ ಬ್ಯಾಂಕ್ಗಳಲ್ಲಿ ಬೆಳೆ ಸಾಲ ಮಾಡಿದ ರೈತರಿಗೆ ಇಲ್ಲಿವರೆಗೂ ಸಾಲ ಮನ್ನಾ ಹಣ ಸಂದಾಯವಾಗಿಲ್ಲ.
ಸಂಕಷ್ಟದಲ್ಲಿ ರೈತರು: ರಾಜ್ಯದ ರೈತರಿಗೆ ನಾಲ್ಕೈದು ವರ್ಷಗಳಿಂದ ಮುಂಗಾರು ಹಾಗೂ ಹಿಂಗಾರು ಮಳೆ ಸಮರ್ಪಕ ಆಗದ್ದರಿಂದ ರೈತ ಸಮುದಾಯ ತೀವ್ರ ಸಂಕಷ್ಟದಲ್ಲಿದ್ದಾರೆ ಎನ್ನುವುದು ಸರ್ಕಾರಕ್ಕೆ ಗೊತ್ತಿರುವ ವಿಷಯ. ಆದರೂ ಸರ್ಕಾರ ರೈತರ ಬಗ್ಗೆ ನಿಷ್ಕಾಳಜಿಯಿಂದ ವರ್ತಿಸುತ್ತಿರುವುದು ಮಾತ್ರ ಬೇಸರದ ಸಂಗತಿ. ಪ್ರತಿ ವರ್ಷದಂತೆ ಮತ್ತೆ ಬಿತ್ತನೆಗೆ ರೈತರು ಬ್ಯಾಂಕ್ಗಳಲ್ಲಿ ಭೂಮಿ ಅಡಾ ಇಟ್ಟು ಬೆಳೆ ಸಾಲ ಮಾಡಿ ಭೂಮಿ ಬಿತ್ತನೆಗೆ ಬೀಜ, ಗೊಬ್ಬರ, ಇತರೆ ಖರ್ಚುಗಳನ್ನು ಮಾಡಿದ್ದು, ಅದನ್ನು ತೀರಿಸಲು ಸಾಧ್ಯವಾಗದೇ ಈ ಹಿಂದೆ ಸರ್ಕಾರವೇ ಮಾಡಿದ್ದ ರೈತರ ಸಾಲಮನ್ನಾ ಹಣ ಕೂಡಾ ಸಂದಾಯವಾಗದೇ ಇರುವುದರಿಂದ ಇಲ್ಲಿನ ಬಡ ರೈತರು ಪಕ್ಕದ ರಾಜ್ಯಗಳಿಗೆ ಗುಳೆ ಹೋಗುವಂತಾಗಿದೆ.
175 ಬ್ಯಾಂಕ್ಗಳಲ್ಲಿ ಸಮಸ್ಯೆ: ರಾಜ್ಯದ 30 ಜಿಲ್ಲೆಗಳ ವ್ಯಾಪ್ತಿಯಲ್ಲಿರುವ 175 ಪಿಎಲ್ಡಿ ಬ್ಯಾಂಕ್ಗಳಲ್ಲೂ ಈ ಸಮಸ್ಯೆ ಸೃಷ್ಟಿಯಾಗಿದೆ. ಸಾಲ ಮಾಡಿದ ಸಾವಿರಾರು ರೈತರು ಸಾಲ ಪಡೆದಿದ್ದು, ನಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಸರ್ಕಾರ ಮೌನ ವಹಿಸಿದೆ. ಪಿಎಲ್ಡಿ ಬ್ಯಾಂಕ್ಗಳಲ್ಲಿ ಸಾಲ ಪಡೆದಿರುವ ರೈತರ ಬಗ್ಗೆ ನಿರ್ಲಕ್ಷ್ಯ ತಾಳುತ್ತಿದ್ದಾರೆ. ಈ ಬಗ್ಗೆ ರಾಜ್ಯದ ಹಲವು ಜಿಲ್ಲೆಗಳ ರೈತರು ಕೃಷಿ ಸಚಿವರಿಗೆ ಮನವಿ ಸಲ್ಲಿಸಿದರೂ ಅದರ ಬಗ್ಗೆ ಗಮನ ನೀಡಿಲ್ಲ ಎನ್ನುವ ಆರೋಪ ರೈತರಿಂದ ಕೇಳಿ ಬರುತ್ತಿದೆ.
- ಎಸ್.ಜಿ. ತೆಗ್ಗಿನಮನಿ